ADVERTISEMENT

‘ಮಹಾದಾಯಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧ’

ಮಲಪಭ್ರೆಯ ಬರಿದಾದ ಒಡಲಲ್ಲಿ ಕಳಸಾ–ಬಂಡೂರಿಗಾಗಿ ಜೆಡಿಎಸ್‌ನಿಂದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 4:47 IST
Last Updated 12 ಜುಲೈ 2017, 4:47 IST

ಸವದತ್ತಿ: ‘ಜೀವನದಿ ಮಲಪ್ರಭಾ ನದಿಗೆ ಕಳಸಾ–ಬಂಡೂರಿ ನಾಲಾ ಜೋಡಣೆ  ಬರಿ ಮಾತಿನಿಂದಲ್ಲ, ಹೋರಾಟದಿಂದ ಪಡೆಯುತ್ತೇವೆ. ಅದಕ್ಕಾಗಿ ಎಲ್ಲ
ತ್ಯಾಗಕ್ಕೂ ಸಿದ್ಧರಿದ್ದೇವೆ’ ಎಂದು ನವಲಗುಂದ ಶಾಸಕ ಎನ್‌.ಎಚ್‌ ಕೋನರಡ್ಡಿ ಎಚ್ಚರಿಸಿದರು.

ಮಂಗಳವಾರ ಜೆ.ಡಿ.ಎಸ್‌ ನೇತೃತ್ವದಲ್ಲಿ ಪಟ್ಟಣ ಸಮೀಪ ಮಲಪ್ರಭಾ ನದಿಯ ದಡದಲ್ಲಿ, ಕಳಸಾ–ಬಂಡೂರಿ ನಾಲಾ ಜೋಡಿಸುವಂತೆ ಆಗ್ರಹಿಸಿ ನಡೆದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಾಲಾಗಳ ಜೋಡಣೆಗಾಗಿ ಕಳೆದ ಸಾವಿರ ದಿನದಿಂದ ಹೋರಾಟ ಮಾಡಿದ್ದ ರಿಂದ ಈಗ ಜನಾಂದೋಲನವಾಗಿದೆ. ಅದನ್ನು ಹತ್ತಿಕ್ಕುವ ವಿರೋಧಿಗಳಿಗೆ ನಾಚಿಕೆಯಾಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಉತ್ತರ ಕರ್ನಾಟಕವನ್ನು ಗುತ್ತಿಗೆ ಪಡೆದವರಂತೆ ಯಾರು ಇಲ್ಲದ ಸಮಯದಲ್ಲಿ ಮನೆ, ಮನೆಗೆ ತೆರಳಿ ಇಲ್ಲದ ಸುಳ್ಳಿನ ಕಂತೆ ಹೇಳುವ ಬಿಜೆಪಿ ನಾಯಕರು ಅದೇನು ವಿಸ್ತಾರ ಮಾಡುವರೋ, ಯಾರಿಗೆ ವಿಸ್ತರಿಸ್ತಾರೋ ದೇವರಿಗೆ ಗೊತ್ತು’ ಎಂದು ಲೇವಡಿ ಮಾಡಿದರು.

‘ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ 24 ತಾಸಿನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇವೆ. ಹದಗೆಟ್ಟ ಕಾಲುವೆ ದುರಸ್ತಿ ಮಾಡುವ ಮೂಲಕ ಶೇ 39ರಷ್ಟು ನೀರು ಉಳಿಸತ್ತೇವೆ. ಯುವಕರಿಗೆ ಉದ್ಯೋಗ, ವೃದ್ಧರಿಗೆ ಮಾಸಾಶನಗಳಂತಹ ಯೋಜನೆ     ಜಾರಿಗೆ ತರುತ್ತೇವೆ’ ಎಂದು ಭರವಸೆ ನೀಡಿದರು.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡಗೌಡ ಪಾಟೀಲ ಮಾತನಾಡಿ, ‘ನಾವೆಲ್ಲರು ಒಗ್ಗಟ್ಟಾಗುವ ಮೂಲಕ ರೈತ ವಿರೋಧಿ ಪಕ್ಷದ ಬೋಗಸ್‌ ನಾಯಕರಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ಬರುವ ದಿನಗಳೆಲ್ಲವು ಜೆಡಿಎಸ್‌ನದ್ದಾಗಿವೆ. ಆಗ ಕಳಸಾ–ಬಂಡೂರಿ ನಾಲಾ ತಾನಾಗೆ ಜೋಡಣೆಯಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ರಾಜು ಕೊರವಿ, ಮಲ್ಲಿಕಾರ್ಜುನ ಅಕ್ಕಿ, ಮುಜಾವರ ಕಂಟ್ರಾಕ್ಟರ್‌, ಹಣಮಂತಪ್ಪ ಕಲ್ಲೂರ, ಗಂಗಾಧರ ಪಾಟೀಲ, ಈಶ್ವರ ಮೇಲಗಿರಿ, ವಿಕಾಸ ಸೊಪ್ಪಿನ, ಎಂ.ಎಸ್‌ ರೋಣದ, ಎನ್‌.ಎಚ್‌ ದೇವರಡ್ಡಿ, ಬಸವರಾಜ ಪಾಟೀಲ, ಸಂಗಮೇಶ ಮಡಿವಾಳರ,  ಶ್ರೀಶೈಲ ಮೇಲಿನಮನಿ, ಅಲ್ತಾಫ್‌ ಹೂಲಿ, ಕರೆಪ್ಪ ಹದ್ಲಿ, ರೈತ ನವಲಗುಂದ, ಸವದತ್ತಿ, ನರಗುಂದ ಭಾಗದ ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.