ADVERTISEMENT

‘ಮಾತೃಪೂರ್ಣ ಯೋಜನೆ ಸೌಲಭ್ಯ: ಮನೆಮನೆಗೆ ಲಭಿಸಲಿ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 9:27 IST
Last Updated 26 ನವೆಂಬರ್ 2017, 9:27 IST
ಬೆಳಗಾವಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಿಇಓ ಆರ್‌. ರಾಮಚಂದ್ರನ್‌ ಮಾತನಾಡಿದರು. ಅಧ್ಯಕ್ಷೆ ಆಶಾ ಐಹೊಳೆ ಇದ್ದರು.
ಬೆಳಗಾವಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಿಇಓ ಆರ್‌. ರಾಮಚಂದ್ರನ್‌ ಮಾತನಾಡಿದರು. ಅಧ್ಯಕ್ಷೆ ಆಶಾ ಐಹೊಳೆ ಇದ್ದರು.   

ಬೆಳಗಾವಿ: ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆ ಸೂಕ್ತ ಸ್ಪಂದನೆ ಇಲ್ಲದಿರುವುದರಿಂದ ಮೊದಲಿನಂತೆ ಫಲಾನುಭವಿಗಳ ಮನೆಮನೆಗೆ ಸೌಲಭ್ಯಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಒತ್ತಾಯಿಸಿದರು.

ಶನಿವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ವಿಷಯ ಪ್ರಸ್ತಾಪಿಸಿ, ಯೋಜನೆ ಅನುಷ್ಠಾನ ಸರಿಯಾಗಿಲ್ಲ, ಸರ್ಕಾರದಿಂದ ಬಂದ ಸೌಲಭ್ಯಗಳು ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಸದಸ್ಯರು ಈ ಯೋಜನೆಯನ್ನೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿಗಳಿಗೆ ಗರ್ಭಿಣಿಯರು ಹಾಗೂ ಬಾಣಂತಿಯರು ಬರುತ್ತಿಲ್ಲ, ಕೊಡುವ ಸೌಲಭ್ಯಗಳಲ್ಲಿ ಹುಳುಗಳ ಬಾಧೆ ಇದೆ, ತತ್ತಿಗಳ ಹಂಚಿಕೆಯಾಗಿಲ್ಲ ಎಂಬ ಹಲವು ಸಮಸ್ಯೆಗಳನ್ನು ಸದಸ್ಯರು ಸಭೆಗೆ ತಿಳಿಸಿದರು.

ADVERTISEMENT

‘ಮಾತೃಪೂರ್ಣ ಯೋಜನೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ತೊಂದರೆಯಾಗುತ್ತಿದೆ. ಬಾಣಂತಿಯರು ಕೇಂದ್ರಗಳಿಗೆ ಬಂದು ಆಹಾರ ಸ್ವೀಕರಿಸುವುದು ಕೂಡ ಕಷ್ಟ. ಆದ್ದರಿಂದ ಬಾಣಂತಿಯರಿಗೆ ಮನೆಗೆ ಆಹಾರವನ್ನು ಕಳುಹಿಸಿ ಕೊಡುವ ವ್ಯವಸ್ಥೆಯಾಗಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಸದಸ್ಯರ ಬೇಡಿಕೆಗಳು ಹಾಗೂ ಅವರ ಕ್ಷೇತ್ರದ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಸದಸ್ಯರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು ಎಂದು ಸಿಇಓ ರಾಮಚಂದ್ರನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ಕೋಳ ಕ್ಷೇತ್ರದಲ್ಲಿ ಕೋಳಿ ಫಾರ್ಮ ಆರಂಭಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಆ ಕ್ಷೇತ್ರದ ಸದಸ್ಯರು ‘ಒಂದು ವೇಳೆ ಫಾರ್ಮ್‌ ಆರಂಭಿಸಿದರೆ ಗ್ರಾಮಸ್ಥರನ್ನು ಕರೆ ತಂದು ಧರಣಿ ನಡೆಸುವುದಾಗಿ ಎಚ್ಚರಿಕೆ’ ನೀಡಿದರು.

ಅನುದಾನದ ತಾರತಮ್ಯ: ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ, ಒಂದು ಕ್ಷೇತ್ರಕ್ಕೆ ಹೆಚ್ಚು, ಇನ್ನೊಂದು ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದರು. ಆದರೆ ಅಧ್ಯಕ್ಷೆ ಆಶಾ ಐಹೊಳೆ ಪ್ರತಿಕ್ರಿಯಿಸಿ, ಅಂಥ ತಾರತಮ್ಯ ನಡೆದಿಲ್ಲ ಎಂದು ಸಮರ್ಥಿಸಿಕೊಂಡರು.

ಸದಸ್ಯರ ಧರಣಿ: ಜನಸಂಖ್ಯೆ ಹಾಗೂ ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲಾ ಪಂಚಾಯ್ತಿಗೆ ಕಡಿಮೆ ಅನುದಾನ ನೀಡಲಾಗುತ್ತಿದ್ದು, ಸರ್ಕಾರ ಅನುದಾನದ ಮೊತ್ತವನ್ನು ಹೆಚ್ಚಿಸದೇ ಇರುವುದನ್ನು ಖಂಡಿಸಿ ಸದಸ್ಯರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಎದುರು ಧರಣಿ ಕುಳಿತರು.

ಹೆಚ್ಚಿನ ಅನುದಾನ ಕೋರಲು ಮುಖ್ಯಮಂತ್ರಿ ಹಾಗೂ ಗ್ರಾಮೀಣ ಮತ್ತು ಪಂಚಾಯ್ತಿ ರಾಜ್ಯ ಸಚಿವ ಎಚ್‌.ಕೆ. ಪಾಟೀಲ ಅವರಿಗೆ ಭೇಟಿಯಾಗಲು ಎಲ್ಲ ಸದಸ್ಯರ ನಿಯೋಗ ಹೋಗಲು ನಿರ್ಧರಿಸಲಾಗಿತ್ತು, ಆದರೆ ಅಧ್ಯಕ್ಷರೊಬ್ಬರೇ ಹೋಗಿ ಸದಸ್ಯರನ್ನು ಕಡೆಗಣಿಸಿದ್ದೇಕೆ ಎಂದ ಕೆಲವರು ಪ್ರಶ್ನಿಸಿದರು.

ಸಿಇಓ ಆರ್‌. ರಾಮಚಂದ್ರನ್ ಪ್ರತಿಕ್ರಿಯಿಸಿ ‘ಸದಸ್ಯರ ಒತ್ತಾಯದ ಮೇರೆಗೆ ಹೆಚ್ಚುವರಿ ಅನುದಾನ ಕೋರಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬಹುದು’ ಎಂದರು.

ಅನುದಾನ ಕೊರತೆ ಎಂಬುದು ಸದಸ್ಯರ ತಪ್ಪು ಕಲ್ಪನೆ ಆಗಿದ್ದು, ರಾಜ್ಯದ ಜನಸಂಖ್ಯೆಯ ಶೇ.10 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಬೆಳಗಾವಿ ಜಿಲ್ಲೆಗೆ ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ಪಂಚಾಯ್ತಿಗೆ ₹ 636 ಕೋಟಿ, ತಾಲ್ಲೂಕು ಪಂಚಾಯ್ತಿಗೆ ₹ 1226 ಕೋಟಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ₹ 56 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ಅನುದಾನ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ತಲಾ ₹ 4 ಕೋಟಿ ರೂಪಾಯಿ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಪ್ರತಿಯೊಂದು ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಅನುಸರಿಸಲಾಗುತ್ತಿದೆ ಎಂದು ಮುಳ್ಳಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.