ADVERTISEMENT

‘ಮೂಡಲಗಿ ತಾಲ್ಲೂಕು ರಚನೆ ಖಚಿತ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 6:23 IST
Last Updated 12 ಸೆಪ್ಟೆಂಬರ್ 2017, 6:23 IST

ಮೂಡಲಗಿ: ‘ಮೂಡಲಗಿ ತಾಲ್ಲೂಕು ರಚನೆಗೆ ನಾನು ಬದ್ಧನಾಗಿದ್ದು, ತಾಲ್ಲೂಕು ರಚನೆಗೆ ನಾನು ವಿರೋಧಿ ಅಲ್ಲ, ಇಲ್ಲಸಲ್ಲದ  ವದಂತಿಗಳನ್ನು ನಂಬಬೇಡಿ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಷ್ಪವಾಗಿ ಹೇಳಿದರು.

ಮೂಡಲಗಿ ತಾಲ್ಲೂಕು ರಚನೆಗಾಗಿ ಕಳೆದ ನಾಲ್ಕು ದಿನಗಳಿಂದ ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ನಡೆಸುತ್ತಿರುವ ಧರಣಿಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು ಜನವರಿ 1ರಂದು ಮೂಡಲಗಿ ತಾಲ್ಲೂಕು ಖಂಡಿತವಾಗಿ ಅಸ್ತಿತ್ವಕ್ಕೆ ಬರುವುದು ಎಂದು ಹೇಳಿದರು.

ಅರಭಾವಿ ಕ್ಷೇತ್ರದ ಹೋಬಳಿ ಮಟ್ಟದ ಗ್ರಾಮಗಳ ವಿಂಗಡಣೆಯ ಸಮಸ್ಯೆ ಮತ್ತು ರಾಯಬಾಗ ತಾಲ್ಲೂಕಿನ ಕೆಲವು ಗ್ರಾಮಗಳ ಸೇರ್ಪಡೆಯು ತಾಲ್ಲೂಕು ರಚನೆಯ ಆಡಳಿತಾತ್ಮಕ ಅನುಮೋದನೆಗೆ ತಡೆಯಾಗಿದೆಯೇ ಹೊರತು, ತಾಲ್ಲೂಕು ರದ್ದತಿ ಆಗಿರುವುದಿಲ್ಲ ಎಂದು ಅವರು ಮನವರಿಕೆ ಮಾಡಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ಬಗ್ಗೆ ಚರ್ಚಿಸಿರುವೆ.  ಅರಭಾವಿ ಕ್ಷೇತ್ರದ ಗ್ರಾಮಗಳನ್ನು ಒಟ್ಟುಗೂಡಿಸಿ ಮೂಡಲಗಿ ತಾಲ್ಲೂಕು ರಚನೆಗೆ ಹೋರಾಟ ಸಮಿತಿಯ ಪದಾಧಿಕಾರಿಗಳ ಜತೆ ಇದೇ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಾಲ್ಲೂಕು ಮಾಡಿಸಿ ಕೊಡುವುದು ನನ್ನ ಜವಾಬ್ದಾರಿ’ ಎಂದರು.

ಗೋಕಾಕದಲ್ಲಿ ಇರುವ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ತಾಲ್ಲೂಕು ಕಚೇರಿಯನ್ನು ಒಂದು ವಾರದಲ್ಲಿ ಮೂಡಲಗಿಗೆ ಸ್ಥಳಾಂತರ ಆಗಲಿದೆ ಮತ್ತು  ಅಧಿಕಾರಿಗಳೊಂದಿಗೆ ಚರ್ಚಿಸಿ ಅಕ್ಟೋ ಬರ್‌ ಮೊದಲ ವಾರದಲ್ಲಿ ಉಪ ನೋಂದಣಿ ಕಚೇರಿ  ಪ್ರಾರಂಭಿಸು ವುದಾಗಿ ಭರವಸೆ ನೀಡಿದರು.

‘ತಾಲ್ಲೂಕಿಗಾಗಿ ನಡೆಸುತ್ತಿರುವ ಧರಣಿಯ ವೇದಿಕೆಯು ರಾಜಕೀಯ ವೇದಿಕೆ ಮಾಡಬೇಡಿ’ ಎಂದು ಹೋರಾ ಟಗಾರರಿಗೆ ಮನವಿ ಮಾಡಿದರು. ತಾಲ್ಲೂಕು ರಚನೆಗಾಗಿ ನಡೆಸಿರುವ ಹೋರಾಟವು ಶಾಂತ ರೀತಿಯಿಂದ ನಡೆಯಲಿ. ಸಂತೆ ಬಂದ್‌ ಮಾಡಿ ಉಗ್ರ ಹೋರಾಟ ಮಾಡುವುದರಿಂದ ಸಾರ್ವ ಜನಿಕರಿಗೆ ತೊಂದರೆಯಾಗುತ್ತದೆ ಎಂದು ತಿಳಿ ಹೇಳಿದರು.

ತಾಲ್ಲೂಕು ಹೋರಾಟ ಸಮಿತಿ ಸಂಚಾಲಕ ಭೀಮಪ್ಪ ಗಡಾದ ಮಾತನಾಡಿ ಶಾಸಕರ ಮಾತಿಗೆ ಎಲ್ಲರ ಬೆಂಬಲವಿದೆ. ಅದಷ್ಟು ಬೇಗನೆ ತಾಲ್ಲೂಕು ರಚನೆಯ ಆದೇಶ ಹೊರಡಿಸ ಬೇಕು ಎಂದು ಒತ್ತಾಯಿಸಿದರು.

ಬಸಗೌಡ ಪಾಟೀಲ ನಾಗನೂರ, ಎಸ್.ಆರ್. ಸೋನವಾಲಕರ, ಎಸ್.ಜಿ. ಢವಳೇಶ್ವರ, ಬಿ.ಬಿ. ಹಂದಿಗುಂದ, ಡಿ.ಬಿ. ಪಾಟೀಲ, ಡಾ. ಬಾಬಣ್ಣವರ ಸೇರಿದಂತೆ ಪತ್ರಕರ್ತ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ, ವಕೀಲರ ಸಂಘದ ಪದಾಧಿಕಾರಿಗಳು ಧರಣಿಯಲ್ಲಿ ಭಾಗವಹಿಸಿದ್ದರು.

ಮೂಡಲಗಿಯಲ್ಲಿ ಕೋರ್ಟ್‌ ಮತ್ತು ಮಿನಿವಿಧಾನ ಸೌಧ ನಿರ್ಮಾಣಕ್ಕೆ ನಿವೇಶನ ಗುರುತಿಸಿರುವ ನಾನು, ತಾಲ್ಲೂಕಿಗೆ ವಿರೋಧಿ ಎನ್ನುವ ಪಟ್ಟ ಕಟ್ಟುತ್ತಿರುವುದು ವಿಷಾದಕರ
ಬಾಲಚಂದ್ರ ಜಾರಕಿಹೊಳಿ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.