ADVERTISEMENT

ರಂಗಕಲೆಯಿಂದ ಮಾನಸಿಕ ನೆಮ್ಮದಿ

'ಅಪ್ಪ ಹನುಮಂತ, ಮಗ ಗುಣವಂತ' ನಾಟಕ ಪ್ರದರ್ಶನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:29 IST
Last Updated 3 ಫೆಬ್ರುವರಿ 2017, 6:29 IST

ಗೋಕಾಕ: -ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ರಂಗಭೂಮಿ ಜನಿಸುವುದರೊಂದಿಗೆ ಗೋಕಾವಿ ನಾಡು ಕಲಾವಿದರ ತವರೂರು ಎಂದು ಕರೆಸಿಕೊಳ್ಳುತ್ತಿದೆ ಎಂದು ಖ್ಯಾತ ರಂಗಭೂಮಿ ಹಾಗೂ  ಕಿರುತೆರೆ ಕಲಾವಿದೆ ಮಾಲತಿಶ್ರೀ ಮೈಸೂರ ಅಭಿಪ್ರಾಯಟ್ಟರು.

ನಗರದಲ್ಲಿ  ವಿಶ್ವಭಾರತಿ ರಮ್ಯ ನಾಟಕ ಸಂಘದಿಂದ ಗುರುವಾರ ನಡೆದ 'ಅಪ್ಪ ಹಣವಂತ, ಮಗ ಗುಣವಂತ' ಹಾಸ್ಯ ನಾಟಕದ ಪ್ರಥಮ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೋಕಾಕ ನಾಡಿನ ಜನ ರಂಗಭೂಮಿಯನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಕಲಾ ಪೋಷಕರಿಂದ ಈ ನಾಡು ತುಂಬಿದೆ. ಇಂದಿನ ತಾಂತ್ರಿಕ ಯುಗದಲ್ಲಿ ನಾಟಕ ಕಂಪನಿ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಜನತೆ ಕಲಾವಿದರನ್ನು ಪ್ರೋತ್ಸಾಹಿಸಿ ನಾಟಕ ರಂಗವನ್ನು ಬೆಳೆಸಬೇಕು ಎಂದು ವಿನಂತಿಸಿದರು.

ಬಿಜೆಪಿ ಮುಖಂಡ ಅಶೋಕ ಪೂಜಾರಿ  ಮಾತನಾಡಿ, ಜನತೆಗೆ ನಿಜವಾದ ಮಾನಸಿಕ ನೆಮ್ಮದಿ ರಂಗಭೂಮಿಯಿಂದ ದೊರೆಯುತ್ತದೆ. ಕಲಾವಿದರು, ಸಂಗೀತಕಾರರು, ಸಾಹಿತಿಗಳು ದೈವಿ ಸ್ವರೂಪದವರಾಗಿದ್ದು ಅವರಿಗೆ ಕಲೆ ದೇವರ ಕೊಡುಗೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಗೋಕಾಕ ನಗರದಲ್ಲಿ ರಂಗಾಸಕ್ತರಿಗಾಗಿ ಕಲಾಮಂದಿರದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ರಂಗಭೂಮಿ ಇಂದು ವಿನಾಶದ ಅಂಚಿನತ್ತ ತಳ್ಳಲ್ಪಡುತ್ತಿದ್ದು, ಅದರ ರಕ್ಷಣೆಗೆ ಕಲಾಸಕ್ತರು ಮುಂದಾಗದಿದ್ದರೆ ರಂಗಕಲೆ ನಶಿಸಿ ಹೋಗುವುದು. ಕಲಾವಿದರಿಗೆ ದಯನೀಯ ಸ್ಥಿತಿ ಬರದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಕಲಾವಿದರಿಗೆ ಮಾಶಾಸನ  ಮತ್ತು ನಾಟಕ ಕಂಪನಿಗಳಿಗೆ ಸಹಾಯಧನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಾಟಕ ಕಂಪನಿ ಅಧ್ಯಕ್ಷ ಬಸವರಾಜ ಬೆಂಗೇರಿ ಅವರನ್ನು ನಗರದ ಕಲಾ ಆರಾಧಕರ ಪರವಾಗಿ ಸತ್ಕರಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ಸೋಮಶೇಖರ ಮಗದುಮ್ಮ, ಶಾಮಾನಂದ ಪೂಜೇರಿ, ರಜನಿ ಜೀರಗ್ಯಾಳ, ಸಂಗೀತಾ ಬನ್ನೂರ, ವೈಶಾಲಿ ಭರಭರಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.