ADVERTISEMENT

ರಕ್ಕಸಕೊಪ್ಪ ಜಲಾಶಯ ತುಂಬಲು 10 ಅಡಿ ಬಾಕಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:14 IST
Last Updated 21 ಜುಲೈ 2017, 7:14 IST

ಬೆಳಗಾವಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲಗಳಲ್ಲೊಂದಾಗಿರುವ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಭರ್ತಿಗೆ ಇನ್ನು 10 ಅಡಿಗಳಷ್ಟೇ ಬಾಕಿ ಇದೆ. ಜಲಾಶಯದ ಗರಿಷ್ಠ ಮಟ್ಟ 2476.50 ಅಡಿ ಇದ್ದು, ಗುರುವಾರದ ಮಟ್ಟ 2466.60 ಅಡಿಗಳಷ್ಟಿತ್ತು. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2468.60 ಅಡಿಗಳಷ್ಟಿತ್ತು.

ಬೇಸಿಗೆಯಲ್ಲಿ ಈ ಜಲಾಶಯದ ನೀರಿನ ಮಟ್ಟ ಕನಿಷ್ಠ ಮಟ್ಟವನ್ನು ತಲುಪಿ, ಜೀವಿತ ಶೇಖರಣೆ ಬರಿದಾಗಿತ್ತು. ಡೆಡ್‌ಸ್ಟೋರೇಜ್‌ನಿಂದ ನೀರನ್ನು ಪಂಪ್‌ ಮಾಡಲಾಗುತ್ತಿತ್ತು. ಇದರಿಂದ, ಕುಡಿಯುವ ನೀರಿಗೆ ಅಭಾವ ಎದುರಾಗುತ್ತದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಕೆಲವು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಮಳೆ ಮುಂದುವರಿದಲ್ಲಿ ಕೆಲವೇ ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ.

‘ರಕ್ಕಸಕೊಪ್ಪ ಹಾಗೂ ಹಿಡಕಲ್‌ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಿಂದಾಗಿ, ಒಳಹರಿವು ಆರಂಭವಾಗಿದೆ. ಈ ನೀರನ್ನು ಜಲಮಂಡಳಿಯಿಂದ ಶುದ್ಧೀಕರಿಸಲಾಗುತ್ತಿದೆ. ಸಮರ್ಪಕ ಪ್ರಮಾಣದಲ್ಲಿ ಕ್ಲೋರಿನ್‌ ಬೆರೆಸಿ ಪೂರೈಸಲಾಗುತ್ತಿದೆ. ಆದರೂ, ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ನೀರನ್ನು ಕುದಿಸಿ ಕುಡಿಯಬೇಕು’ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.