ADVERTISEMENT

ರಾಮದುರ್ಗ: ಜನಸಾಗರದೊಂದಿಗೆ ಬಂದ ಅಭ್ಯರ್ಥಿಗಳು

ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ವಾಹನ ದಟ್ಟಣೆ, ಜನಸಂದಣಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:10 IST
Last Updated 24 ಏಪ್ರಿಲ್ 2018, 6:10 IST
ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಅಶೋಕ ಪಟ್ಟಣ ಅವರು ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು
ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಅಶೋಕ ಪಟ್ಟಣ ಅವರು ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು   

ರಾಮದುರ್ಗ: ರಾಮದುರ್ಗ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೋಮವಾರ ಶಕ್ತಿ ಪ್ರದರ್ಶನ ಮಾಡಲು ತಮ್ಮ ಬೆಂಬಲಿಗರನ್ನು ಕರೆ ತಂದು ಪ್ರತ್ಯೇಕ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಮಹಾದೇವಪ್ಪ ಪಟ್ಟಣ, ಬಿಜೆಪಿಯಿಂದ ಮಾಜಿ ಶಾಸಕ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ ಅವರು ಚುನಾವಣಾಧಿಕಾರಿ ಕೆ. ಮಹೇಶ್ವರಪ್ಪ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಪಿ.ಎಫ್. ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ‘ಸಮಾಜದ ಮುಖಂಡರು ತಮ್ಮ ಸಮಾಜಕ್ಕೆಅವಕಾಶ ಲಭ್ಯವಾಗಿಲ್ಲ’ ಎಂದು ಅವರು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನ ಅಭ್ಯರ್ಥಿ ಅಶೋಕ ಪಟ್ಟಣ ಅವರು ಪಟ್ಟಣದಲ್ಲಿನ ಪ್ಯಾಟಿ ಬಸವಣ್ಣನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಬೆಂಬಲಿಗರೊಂದಿಗೆ ಜುನಿಪೇಠ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆತೆರಳಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಪಕ್ಷದ ಅಭ್ಯರ್ಥಿ ಮಹಾದೇವಪ್ಪ ಯಾದವಾಡ ಸರ್ಕಾರಿ ಆಸ್ಪತ್ರೆ ಹತ್ತಿರದ ಶಂಕರಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಬೆಂಬಲಗರೊಂದಿಗೆ ಜುನಿಪೇಠ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ADVERTISEMENT

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಸಾಕಷ್ಟು ಬೆಂಬಲಿಗರೊಂದಿಗೆ ಒಂದೇ ದಿನ ಮೆರವಣೆಗೆ ಮೂಲಕ ನಾಮಪತ್ರ ಸಲ್ಲಿಸಲು ಆಗಮಿಸಿದ್ದರಿಂದ ಪಟ್ಟಣದಲ್ಲಿ ಅಪಾರ ಜನಸಂದಣಿಯಾಗಿ ಪಟ್ಟಣದ ಕೆಲವು ಪ್ರಮುಖ ರಸ್ತೆಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರ ತನಕ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಎರಡೂ ಪಕ್ಷಗಳ ಬೆಂಬಲಿಗರು ಏಕಾಏಕಿ ಊಟಕ್ಕೆ ತೆರಳಿದ್ದರಿಂದ ಎಲ್ಲ ಹೋಟೆಲ್‌ಗಳು, ವ್ಯಾಪಾರಿ ಮಳಿಗೆಗಳು, ಬಾರ್‌ಗಳು ಜನರಿಂದ ತುಂಬಿಹೋಗಿದ್ದವು. ಬಹುತೇಕರು ಊಟ ಸಿಗದೇ ಪರದಾಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರು ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ತಮ್ಮ ತಮ್ಮ ಅಭ್ಯರ್ಥಿಯ ಪರ ಜೈಕಾರ ಕೂಗಿದರು. ಅಭ್ಯರ್ಥಿಗಳು ಈಗಾಗಲೇ ವಿಜಯ ಸಾಧಿಸಿದ್ದಾರೆ ಎನ್ನುವಷ್ಟು ಕುಣಿದು ಕುಪ್ಪಳಿಸಿದರು.

ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಪೊಲೀಸರು ಮತ್ತು ಮೀಸಲು ಪಡೆ ಪೊಲೀಸರು ಸಾರ್ವಜನಿಕರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಮಿನಿ ವಿಧಾನಸೌಧದ ಸುತ್ತಲೂ ಪೊಲೀಸ್ ಬಂದೋಬಸ್ತ್‌ಗೆ ಡಿವೈಎಸ್‍ಪಿ ರೇಣುಕಾಪ್ರಸಾದ್ ಸೂಕ್ತ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.