ADVERTISEMENT

ರಾಷ್ಟ್ರೀಯ ಸ್ಮಾರಕ ಮಾಡಲು ಕ್ರಮ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 6:26 IST
Last Updated 20 ನವೆಂಬರ್ 2017, 6:26 IST

ಬೈಲಹೊಂಗಲ: ‘ವೀರರಾಣಿ ಕಿತ್ತೂರ ಚನ್ನಮ್ಮನ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿಗೆ ಭಾನುವಾರ ಭೇಟಿ ನೀಡಿ ವಂದನೆ ಸಲ್ಲಿಸಿ ಅವರು ಮಾತನಾಡಿದರು.

‘ಚನ್ನಮ್ಮನ ಕರ್ಮಭೂಮಿ ಕಿತ್ತೂರು. ಚನ್ನಮ್ಮನ ಸಮಾಧಿ ಸ್ಥಳ ಬೈಲಹೊಂಗಲ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೂಟ್ಟೂರಾದ ಸಂಗೊಳ್ಳಿ, ಗಲ್ಲಿಗೇರಿಸಿದ ಸ್ಥಳ ನಂದಗಡ ಇವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣನಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತೇವೆ’ ಎಂದರು.

‘ಭಾರತದ ವಿದ್ಯಾರ್ಥಿಗಳು ಚನ್ನಮ್ಮ, ರಾಯಣ್ಣನ ಸಮಾಧಿ ಸ್ಥಳಕ್ಕೆ ಬಂದು ತ್ಯಾಗ, ಬಲಿದಾನ, ದೇಶಪ್ರೇಮ, ಕೆಚ್ಚೆದೆ ಬಗ್ಗೆ ತಿಳಿದುಕೊಳ್ಳುವಂತೆ ಅಭಿವೃದ್ಧಿ ಕಾರ್ಯ ಮಾಡುವುದಾಗಿ’ ಅವರು ಭರವಸೆ ನೀಡಿದರು.

ADVERTISEMENT

‘ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ವಿಧಾನ ಸಭೆಯಲ್ಲಿ ಹೋರಾಟ ಮಾಡಿ ₹ 1 ಕೋಟಿ ಅನುದಾನ ಬಿಡುಗಡೆ ಮಾಡಿಸಿ, ಚನ್ನಮ್ಮನ ಸಮಾಧಿ ಸ್ಥಳ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ರಾಷ್ಟ್ರೀಯ ಸ್ಮಾರಕ ಮಾಡಲು ಕೇಂದ್ರದಲ್ಲಿ ಅಗತ್ಯವಾದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವೆ’ ಎಂದು ತಿಳಿಸಿದರು.

ಶಾಸಕ ಡಾ.ವಿಶ್ವನಾಥ ಪಾಟೀಲ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಚಂದ್ರು ಚಿನಿವಾಲರ, ಗೂಳಪ್ಪ ಹೊಸಮನಿ, ಮಹೇಶ ಹರಕುಣಿ, ರಾಜು ಭರಮಗೌಡರ, ಸುರೇಶ ಯರಗಟ್ಟಿ, ಶಾಂತವೀರ ಕುಡಸೋಮಣ್ಣವರ, ಈಶ್ವರ ಬೋರಕನವರ, ರಾಜು ನರಸಣ್ಣವರ, ಬಸವರಾಜ ನೇಸರಗಿ, ಮಲ್ಲಿಕಾರ್ಜುನ ಉಳ್ಳೇಗಡ್ಡಿ, ಗಂಗಾಧರ ಹರಕುಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.