ADVERTISEMENT

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಮೇ 2018, 9:04 IST
Last Updated 26 ಮೇ 2018, 9:04 IST
ಸಾಲಮನ್ನಾ ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು
ಸಾಲಮನ್ನಾ ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು   

ಬೆಳಗಾವಿ: ರೈತರ ಸಂಪೂರ್ಣ ಸಾಲಮನ್ನಾ ಮಾಡುವುದು ಸೇರಿದಂತೆ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಸದಸ್ಯರು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಸಂಚಾಲಕರಾದ ಚೂನಪ್ಪ ಪೂಜೇರಿ ನೇತೃತ್ವದಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ರೈತರು ತೀರ ಸಂಕಷ್ಟದಲ್ಲಿದ್ದಾರೆ, ಸಾಲಬಾಧೆಯಿಂದ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ, ಕೃಷಿ ಉದ್ಯೋಗದ ಮೇಲೆ ರೈತರು ಭರವಸೆ ಕಳೆದುಕೊಂಡಿದ್ದಾರೆ, ಕೂಡಲೇ ಸಾಲ ಮನ್ನಾ ಮಾಡಿ, ರೈತರಲ್ಲಿ ವಿಶ್ವಾಸ ತುಂಬಬೇಕು ಎಂದು ಒತ್ತಾಯಿಸಿದರು.

ನೌಕರರಿಗೆ ವೇತನ ಆಯೋಗದ ವರದಿ ಪ್ರಕಾರ ಕೊಡುವ ಸೌಲಭ್ಯಕ್ಕೆ ಅನುಗುಣವಾಗಿ ರೈತರಿಗೂ ಅವರು ಬೆಳೆದ ಬೆಳೆಗೆ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತರಿಗೆ ರಾತ್ರಿ ಹೊತ್ತು ಕತ್ತಲು, ಹುಳುಹುಪ್ಪಡಿ ಎನ್ನದೇ ಗದ್ದೆಗೆ ಹೋಗಿ ಬೆಳೆಗೆ ನೀರು ಹಾಯಿಸುವುದು ಕಷ್ಟವಾಗಿದೆ. ಅದಕ್ಕಾಗಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿಯೇ ನಿತ್ಯ 10 ಗಂಟೆ ನಿರಂತರ ವಿದ್ಯುತ್‌ ಪೂರೈಸಬೇಕು ಎಂದು ಹೇಳಿದರು.

ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಮತ್ತು ನದಿಗಳಿಗೆ ನೀರು ಹರಿಸಬೇಕು. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಬೀಜ ಮತ್ತು ಗೊಬ್ಬರವನ್ನು ಸರ್ಕಾರ ಉಚಿತವಾಗಿ ಕೊಡಬೇಕು. ರೈತರು ಬೆಳೆದಿದ್ದನ್ನು ತಾವಷ್ಟೇ ತಿನ್ನುವುದಿಲ್ಲ, ನಾಡಿನ ಜನರಿಗೆ ಕೊಡುತ್ತಾರೆ. ಅದಕ್ಕಾಗಿ ಸರ್ಕಾರ ಈ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲ ಮಹಿಳಾ ಸಂಘಟನೆಗಳಿಗೆ ಸಾಲ ವಿತರಿಸಬೇಕು. ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನೂ ಜಿ.ಎಸ್‌.ಟಿ. ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.

ರೈತರು ಕಾರ್ಖಾನೆಗಳಿಗೆ ಕಬ್ಬು ಕಳಿಸಿ 5–6 ತಿಂಗಳಾದರೂ ಇದುವರೆಗೆ ರೈತರ ಖಾತೆಗೆ ಹಣ ಬಂದಿಲ್ಲ. ಕೂಡಲೇ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಿಲ್‌ ಕೊಡಿಸಬೇಕು ಒತ್ತಾಯಿಸಿದರು.

ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಗೂರಣ್ಣವರ, ಜಿಲ್ಲಾ ಮುಖಂಡರಾದ ಅಶೋಕ ಯಮಕನಮರಡಿ, ರಾಮದುರ್ಗ ತಾಲ್ಲೂಕು ಅಧ್ಯಕ್ಷ ಜಗದೀಶ ದೇವರಡ್ಡಿ, ಶಿವಾನಂದ ದೊಡವಾಡ, ರಾಯಬಾಗ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಗೋಕಾಕ ಅಧ್ಯಕ್ಷ ಸತ್ಯಪ್ಪ ಮಲ್ಲಾಪುರಿ, ರಾಮದುರ್ಗ ಘಟಕದ ಯಲ್ಲಪ್ಪ ದೊಡಮನಿ, ರಮೇಶ ಕಲಹಾರ, ಕುಮಾರ ಮರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.