ADVERTISEMENT

‘ರೈಲ್‌ನೆಟ್‌ ವೈ–ಫೈ’ ಅಳವಡಿಕೆಗೆ ಸಮೀಕ್ಷೆ

ಗೂಗಲ್‌ ಕಂಪೆನಿಯ ಸಹಯೋಗದಲ್ಲಿ ರೈಲ್ವೆ ಇಲಾಖೆಯಿಂದ 400 ನಿಲ್ದಾಣಗಳಲ್ಲಿ ಸೇವೆ

ಶ್ರೀಕಾಂತ ಕಲ್ಲಮ್ಮನವರ
Published 18 ಸೆಪ್ಟೆಂಬರ್ 2017, 6:35 IST
Last Updated 18 ಸೆಪ್ಟೆಂಬರ್ 2017, 6:35 IST
ಬೆಳಗಾವಿ ರೇಲ್ವೆ ನಿಲ್ದಾಣ
ಬೆಳಗಾವಿ ರೇಲ್ವೆ ನಿಲ್ದಾಣ   

ಬೆಳಗಾವಿ: ಇಲ್ಲಿನ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಉಚಿತ ಅಂತರ್ಜಾಲ ಸೌಲಭ್ಯ ಕಲ್ಪಿಸಲು ‘ರೈಲ್‌ನೆಟ್‌ ವೈ–ಫೈ’ ಅಳವಡಿಸುವ ಕುರಿತು ಇಲಾಖೆಯಲ್ಲಿ ಚಿಂತನೆ ನಡೆದಿದೆ.

ಅಂತರ್ಜಾಲ ಸೇವೆ ನೀಡುವ ಗೂಗಲ್‌ ಕಂಪೆನಿಯ ಸಹಯೋಗದಲ್ಲಿ ರೇಲ್ವೆ ಇಲಾಖೆಯು ‘ರೈಲ್‌ನೆಟ್‌ ವೈ–ಫೈ’ ಸೇವೆಯನ್ನು ದೇಶದಾದ್ಯಂತ ನೀಡುತ್ತಿದೆ. ಸುಮಾರು 400 ನಿಲ್ದಾಣಗಳಲ್ಲಿ ನೀಡಲು ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ಇದರಡಿ ಬೆಳಗಾವಿ ರೈಲ್ವೆ ನಿಲ್ದಾಣದಲ್ಲೂ ಇದನ್ನು ಅಳವಡಿಸುವ ಬಗ್ಗೆ ಮಾತುಕತೆಗಳು ನಡೆದಿವೆ. ರೈಲ್ವೆ ಇಲಾಖೆಯ ಎಂಜಿನಿಯರ್‌ಗಳು ಇತ್ತೀಚೆಗೆ ನಿಲ್ದಾಣಕ್ಕೆ ಭೇಟಿನೀಡಿ, ಸಮೀಕ್ಷೆ ನಡೆಸಿದ್ದರು. ಯಾವ ಯಾವ ಸ್ಥಳಗಳಲ್ಲಿ ವೈ–ಫೈ ಹಾಟ್‌ಸ್ಪಾಟ್‌ಗಳನ್ನು ಇಡಬೇಕು ಎನ್ನುವುದರ ಬಗ್ಗೆ ಪರಿಶೀಲಿಸಿ, ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಾರ್ಗದುದ್ದಕ್ಕೂ ಒಎಫ್‌ಸಿ: ಅಂತರ್ಜಾಲ ಸೇವೆ ಆರಂಭಿಸಲು ಬೇಕಾದಂತಹ ಎಲ್ಲ ಸವಲತ್ತು ಈಗಾಗಲೇ ಲಭ್ಯ ಇವೆ. ರೈಲ್ವೆ ಹಳಿ ಉದ್ದಕ್ಕೂ ಒಎಫ್‌ಸಿ (ಆಪ್ಟಿಕಲ್‌ ಫೈಬರ್‌ ಕೇಬಲ್‌) ಅಳವಡಿಸಲಾಗಿದೆ. ಇದು ದೇಶದಾದ್ಯಂತ ಹರಡಿಕೊಂಡಿದೆ. ಹೀಗಾಗಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಮೇಲೆ ರೈಲ್‌ನೆಟ್‌ ಅವಲಂಬನೆಯಾಗಿಲ್ಲ.

ಇಲ್ಲಿ ಪ್ರತಿ ಸೆಕೆಂಡ್‌ಗೆ 1 ಜಿಬಿ ವೇಗದಲ್ಲಿ ಅಂತರ್ಜಾಲದ ಸೇವೆ ದೊರೆಯುತ್ತದೆ. ರೇಡಿಯೊ ಆಧಾರಿತ ನೆಟ್‌ವರ್ಕ್‌ ಹಾಗೂ ತಾಂತ್ರಿಕ ಸಹಾಯವನ್ನು ಗೂಗಲ್‌ ಸಂಸ್ಥೆಯು ನೀಡುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಅನುಕೂಲ: ಬೆಳಗಾವಿಯು ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ನಗರವಾಗಿದೆ. ಈ ಮೂಲಕ ಆ ರಾಜ್ಯಗಳತ್ತ ಪ್ರತಿದಿನ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ವಿಶೇಷವಾಗಿ ರೈಲಿನ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ವೈ–ಫೈ ಕೇಂದ್ರ ಆರಂಭಗೊಂಡರೆ ಇವರಿಗೆಲ್ಲ ಅನುಕೂಲವಾಗಲಿದೆ.

ಸಂಸದರ ವೈ–ಫೈ ಅಡ್ಡಿ:  ಈ ನಿಲ್ದಾಣದಲ್ಲಿ ಈಗಾಗಲೇ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ವೈ–ಫೈ ಕೇಂದ್ರ ಸ್ಥಾಪನೆಯಾಗಿದೆ. ಪುನಃ ರೈಲ್‌ನೆಟ್‌ ವೈ–ಫೈ ಅಳವಡಿಸಬೇಕೋ, ಬೇಡವೋ ಎನ್ನುವ ಯೋಚನೆಯು ಅಧಿಕಾರಿಗಳನ್ನು ಕಾಡುತ್ತಿದೆ. ಹೀಗಾಗಿ ಇದುವೆರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಕೈಕೊಡುತ್ತಿರುವ ವೈ–ಫೈ: ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸ್ಥಾಪನೆಯಾಗಿರುವ ವೈ–ಫೈ ಕೇಂದ್ರವು ಇತ್ತೀಚೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಿಎಸ್‌ಎನ್‌ಎಲ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವೈ–ಫೈ ಲಾಭ ಗ್ರಾಹಕರಿಗೆ ದಕ್ಕುತ್ತಿಲ್ಲ. ಇದನ್ನು ರದ್ದುಪಡಿಸಿ ‘ರೈಲ್‌ನೆಟ್‌್ ವೈ–ಫೈ’ ಸ್ಥಾಪಿಸುವುದೇ ಸೂಕ್ತ ಎಂದು ಸೊಲ್ಲಾಪುರಕ್ಕೆ ಹೊರಟಿದ್ದ ಪ್ರಯಾಣಿಕ ಅಜಿತ್‌ ಪವಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.