ADVERTISEMENT

ಶಾಸಕರ ಕಾರ್ಯಾಲಯಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 4 ಮೇ 2016, 9:07 IST
Last Updated 4 ಮೇ 2016, 9:07 IST
ಕಳಸಾ ಬಂಡೂರಿ ಹೋರಾಟ ನಡೆಸುತ್ತಿರುವ ರೈತರು ನವಲಗುಂದದಲ್ಲಿ ಮಂಗಳವಾರ ಶಾಸಕ ಎನ್.ಎಚ್. ಕೋನರಡ್ಡಿ ಅವರನ್ನು ಕೂಡಿ ಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು
ಕಳಸಾ ಬಂಡೂರಿ ಹೋರಾಟ ನಡೆಸುತ್ತಿರುವ ರೈತರು ನವಲಗುಂದದಲ್ಲಿ ಮಂಗಳವಾರ ಶಾಸಕ ಎನ್.ಎಚ್. ಕೋನರಡ್ಡಿ ಅವರನ್ನು ಕೂಡಿ ಹಾಕಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು   

ನವಲಗುಂದ: ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಜಾರಿಗಾಗಿ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ನಡೆಯುತ್ತಿರುವ ನಿರಂತರ ಧರಣಿ ಸತ್ಯಾಗ್ರಹ 274 ನೇ ದಿನಕ್ಕೆ ಕಾಲಿಟ್ಟಿದ್ದರೂ ತಾರ್ಕಿಕ  ಅಂತ್ಯ ಕಾಣದ್ದರಿಂದ ಮಂಗಳವಾರ ಶಾಸಕ ಎನ್.ಎಚ್. ಕೋನರಡ್ಡಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ನಂತರ ಕೋನರಡ್ಡಿ ಬೀಗ  ಜಡಿಯುವುದರ ಜೊತೆಗೆ ಮುಳ್ಳು  ಕಂಟಿಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸತತವಾಗಿ ಬರಗಾಲದಿಂದ ಸಂಕಷ್ಟ ಅನುಭವಿಸುತ್ತಿರುವ ರೈತರ ಸಾಲ ಮನ್ನಾ ಅಥವಾ ವಿಶೇಷ ಪ್ಯಾಕೇಜ್ ಘೋಷಣೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಕಳಸಾ ಬಂಡೂರಿ ಯೋಜನೆಯ ಪ್ರಕರಣವನ್ನು ನ್ಯಾಯ ಮಂಡಳಿ ಹೊರಗಡೆ ರಾಜೀ ಸಂಧಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಈ ಭಾಗದ ಸಂಸದರು ಕೂಡ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದು ಪ್ರಧಾನ ಮಂತ್ರಿಗಳ ಮೇಲೆ ಒತ್ತಡ ಹೇರಲು ವಿಫಲರಾಗಿದ್ದಾರೆ.

ADVERTISEMENT

ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ವಿನೂತನವಾಗಿ ಈ ಭಾಗದ ಜನಪ್ರತಿನಿಧಿಗಳ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡುತ್ತಿದ್ದೇವೆ. ನೈತಿಕ ಹೊಣೆ ಹೊತ್ತು ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತೇವೆಂದು ಕಳಸಾ ಬಂಡೂರಿ ಹೋರಾಟದ ಒಕ್ಕೂಟದ ಅಧ್ಯಕ್ಷರಾದ ಲೋಕನಾಥ ಹೆಬಸೂರ ಹೇಳಿದರು.

ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ‘ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಒಬ್ಬರ ಮೇಲೊಬ್ಬರು ಬೊಟ್ಟು ಮಾಡುವುದನ್ನು ಬಿಟ್ಟು ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಸಹಕಾರ ನೀಡುವವರೆಗೂ ಈ ಹೋರಾಟ ಮುಂದುವರಿಯಲಿದೆ. ಜನಪ್ರತಿನಿಧಿಗಳು ಸ್ಪಂದಿಸದಿದ್ದರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಮೇ 4 ರಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಪ್ರದೀಪ ಶೆಟ್ಟರ್ ಹಾಗೂ ಮೇಯರ್ ಅವರ ಕಾರ್ಯಾಲಯಕ್ಕೆ ಬೀಗ ಹಾಕಿ ಎಚ್ಚರಿಕೆಯ ಸಂದೇಶ ರವಾನಿಸಲಿದ್ದೇವೆ. ಮೇ 5 ರಂದು ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ  ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಕಾರ್ಯಾಲಯಕ್ಕೂ ಸಹ ಬೀಗ ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.

ರೈತರು ಶಾಸಕರ ಕಾರ್ಯಾಲಯಕ್ಕೆ ಬೀಗ ಹಾಕಿರುವ ಸುದ್ದಿ ತಿಳಿದ ಕೋನರಡ್ಡಿ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚಿಸಿದರು. ‘ರೈತರು ನಡೆಸುತ್ತಿರುವ ಹೋರಾಟಕ್ಕೆ ನಾನು ಬೆಂಬಲ ಕೊಡುತ್ತಲೇ ಬಂದಿದ್ದೇನೆ. ವಿಧಾನಸೌಧದ ಒಳಗೆ ಹಾಗೂ ಹೊರಗೆ ಹೋರಾಟ ಮಾಡಿ ಸರ್ಕಾರದ  ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸದನದಲ್ಲಿ ನನ್ನನ್ನು ಹೊರ ಹಾಕುತ್ತೇನೆಂದರೂ ಜಗ್ಗದೆ ಒಮ್ಮತದ ಐತಿಹಾಸಿಕ ನಿರ್ಣಯ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ.

ಜಿಲ್ಲೆಯಲ್ಲಿ ಬೇರೆ ತಾಲ್ಲೂಕಿಗಿಂತಲೂ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿದ್ದೇನೆ. ನೀವು ನನಗೆ ಮಾಡಿರುವ ಆಶೀರ್ವಾದಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಕೂಡ ನಿಮ್ಮ ಹೋರಾಟದಲ್ಲಿ ಪಾಲ್ಗೊಂಡು ಕಳಸಾ ಬಂಡೂರಿ ನಾಲೆಯ ನೀರು ಕುಡಿಯುವವರೆಗೂ ನಿಮ್ಮೊಂದಿಗೆ ಇರುತ್ತೇನೆ’ ಎಂದು ಭರವಸೆ ನೀಡಿದರು.

ಡಿ.ವಿ.ಕುರಹಟ್ಟಿ, ವೀರಣ್ಣ ನೀರಲಗಿ, ಮಂಜುನಾಥ ಲೂತಿಮಠ, ವೀರಣ್ಣ ಮಳಗಿ, ಶಿವಯೋಗಿ ಸಾಲಿಮಠ, ರಮೇಶ ನವಲಗುಂದ, ಬೀರಪ್ಪ ಪೂಜಾರ, ಹನಮಂತಗೌಡ ಹುಡೇದಗೌಡರ, ರಮೇಶ ಹಲಗತ್ತಿ, ಶಿವಣ್ಣ ಹುಬ್ಬಳ್ಳಿ, ದೇವಪ್ಪ ರೋಣದ, ಶಿವಾನಂದ ಬರದ್ವಾಡ, ಲಕ್ಷ್ಮಣ ಜವಳಗಿ, ಬಸಪ್ಪ ಬೀರಣ್ಣವರ, ಈರನಗೌಡ ಮರಿಗೌಡರ, ಆರ್.ಎಂ.ನಾಯ್ಕರ, ಸಂಗಪ್ಪ ನಿಡವಣಿ, ಸಿದ್ದಪ್ಪ ನಾಯ್ಕರ, ಗುರುಸಿದ್ದಪ್ಪ ಕಾಲುಂಗರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.