ADVERTISEMENT

ಶಿಲೆಗಳ ಕಥೆ: ಅಧ್ಯಯನ ಅಗತ್ಯ

ದೇಸಾಯಿ ಮನೆತನದವರಿಗೆ ಸೇರಿವೆ ಎಂಬುದಾಗಿ ನಂಬಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 8:42 IST
Last Updated 27 ಮೇ 2018, 8:42 IST
ಶಿಲೆಗಳ ಕಥೆ: ಅಧ್ಯಯನ ಅಗತ್ಯ
ಶಿಲೆಗಳ ಕಥೆ: ಅಧ್ಯಯನ ಅಗತ್ಯ   

ಹಿರೇಬಾಗೇವಾಡಿ: ಇವೇನಿವು ಎಂಥ ಕಲ್ಲುಗಳು ಚಿತ್ರಗಳನ್ನು ಬಿಡಿಸಿದ ಹಾಗೆ ಎನೋ ಅಕ್ಷರಗಳನ್ನು ಕೆತ್ತಿದ್ದಾರೆ, ಅವುಗಳನ್ನು ದಿಟ್ಟಿಸಿ ನೋಡಿದರೂ ಅರ್ಥವಾಗವು, ಕೆತ್ತಿದ ಅಕ್ಷರಗಳನ್ನು ಕಷ್ಟ ಪಟ್ಟು ಓದಲು ಪ್ರಯತ್ನಿಸಿದರೂ ತಿಳಿಯದ ಲಿಪಿ ಅದು...

ಹೌದು ಇಲ್ಲಿಯ ಗ್ರಾಮ ಪಂಚಾಯ್ತಿ ಎದುರು ಕನ್ನಡ ಪ್ರಾಥಮಿಕ ಗಂಡು ಮಕ್ಕಳ ಶಾಲೆಗೆ ಹೊಂದಿಕೊಂಡು ಇರುವ ಈ ಕಲ್ಲುಗಳು ಏನೇನೋ ಕಥೆಗಳನ್ನು ಹೇಳುತ್ತಿವೆ.

ಒಟ್ಟಾರೆ ಇಲ್ಲಿ ಮೂರು ಶಿಲೆಗಳಿದ್ದು ಒಂದು ಕಲ್ಲಿನ ಮೇಲೆ ರಾಜನೊಬ್ಬ ಕುದುರೆ ಸವಾರಿ ಮಾಡುತ್ತಿರುವ ಹಾಗೆ ಗೋಚರಿಸುತ್ತದೆ. ಅದರ ಅಕ್ಕ ಪಕ್ಕ ಸೂರ್ಯ ಚಂದ್ರರ ಚಿತ್ರ ಮತ್ತು ಮೇಲೆ ಅಕ್ಷರಗಳನ್ನು ಕೆತ್ತಿದೆ. ಇನ್ನೊಂದು ಶಿಲೆಯ ಮೇಲೆ ಮೇಲೆ ಇಬ್ಬರು ಕೈಮುಗಿದ ದೃಶ್ಯವಿದ್ದು, ಅಕ್ಕ ಪಕ್ಕ ಇಬ್ಬರು ನಿಂತಿದ್ದು ಮೇಲೆ ರಾಕ್ಷಸಾಕಾರದ ಮುಖವಿದೆ. ಕೆಳಗೆ ಪ್ರಾಣಿಯೊಂದಕ್ಕೆ ಆಹಾರ ತಿನಿಸುವ ಹಾಗೆ ತೋರುವು ಇದು ಸ್ವಲ್ಪ ಭಯ ಹುಟ್ಟಿಸುತ್ತದೆ. ಇನ್ನೊಂದು ಶಿಲೆ ಗೋರಿಯ ರೀತಿ ಇದೆ. ಹೊಸಬರು ಇವುಗಳನ್ನು ನೋಡಿದ ತಕ್ಷಣ ಸ್ವಲ್ಪ ನಿಂತು ನೋಡಿ ಕೈಮುಗಿದು ಹೋಗುವುದುಂಟು.

ADVERTISEMENT

ಇವು ಮಾಸ್ತಿಕಲ್ಲುಗಳೋ ವೀರಗಲ್ಲುಗಳೋ ಅಥವಾ ಗೋರಿಕಲ್ಲುಗಳೋ ತಿಳಿಯಬೇಕಾಗಿದರೆ ಇತಿಹಾಸ ತಜ್ಞರು ಇವುಗಳ ಮೆಲೆ ಅಧ್ಯಯನ ನಡೆಸಬೇಕಾಗಿದೆ.

ವಾಡಿಕೆ: ಈ ಕಲ್ಲುಗಳು ಇಲ್ಲಿಯ ದೇಸಾಯಿ ಮನೆತನದವರಿಗೆ ಸೇರಿವೆ ಎಂಬುದಾಗಿ ಹೇಳಲಾಗುತ್ತಿದೆ. ದೇಸಾಯಿ ಮನೆತನಕ್ಕೆ ತನ್ನದೇ ಆದ ಇತಿಹಾಸವಿದೆ, ದೇಸಾಯಿ ಕುಟುಂಬ 19 ಹಳ್ಳಿಗಳಿಗೆ ಜಾಗೀರುದಾರರಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ದೇಸಾಯಿ ಮನೆತನದ ಪ್ರಶಾಂತ ಅವರು, ‘ಈ ಕಲ್ಲುಗಳು ಇದ್ದ ಸ್ಥಳದಲ್ಲಿ ಒಂದು ಚಿಕ್ಕ ಗುಡಿಯಂತಹ ಗುಮ್ಮಟವಿತ್ತು. ಆ ಗುಮ್ಮಟ ಈಗಿಲ್ಲ. ದೇಸಾಯಿ ಮನೆತನದ ಯಾರಾದರೂ ತೀರಿಕೊಂಡಾಗ ಅವರ ಅಸ್ಥಿಯನ್ನು ಈ ಗುಮ್ಮಟದಲ್ಲಿಟ್ಟು ತದನಂತರ ಅದನ್ನು ನದಿಯಲ್ಲಿ ಬಿಡಲಾಗುತ್ತಿತ್ತು. ಈ ಸ್ಥಳದಲ್ಲಿರುವ ಕಲ್ಲುಗಳನ್ನು ಪೂಜ್ಯ ಭಾವನೆಯಿಂದ ಇಡಲಾಗಿದ್ದು ಅವುಗಳಿಗೆ ನಿರಂತರ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಪಕ್ಕದ ಬೆಣಚಿನಮರಡಿ ಉಸ್ತುವಾರಿಗೆ ನೇಮಿಸಲಾಗಿತ್ತು. ಅವರು ಯುಗಾದಿ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಬಂದು ಆ ಕಲ್ಲುಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸುತ್ತಿ ದ್ದರು. ಅವರ ಈ ಕೆಲಸಕ್ಕೆ ಅವರ ಕುಟುಂಬದ ನಿರ್ವಹಣೆಗಾಗಿ ನಾಲ್ಕು ಎಕರೆಗಳಷ್ಟು ಭೂಮಿಯನ್ನು ನಮ್ಮ ಹಿರಿಯರು ದಾನ ಮಾಡಿದ್ದರು’ ಎಂದು ತಿಳಿಸುತ್ತಾರೆ.

ಇಷ್ಟಕ್ಕೂ ಈ ಮೇಲಿನ ವಿಷಯಗಳ ಬಗ್ಗೆ ನಿಖರವಾದ ದಾಖಲೆಗಳನ್ನು ಸಂಗ್ರಹಿಸಿ ಈ ಬಗ್ಗೆ ಸ್ಪಷ್ಟವಾದಂತಹ ನಿರ್ಧಾರಕ್ಕೆ ಬರಬೇಕಾದದ್ದು ಇತಿಹಾಸ ತಜ್ಞರು ಹಾಗೂ ಪ್ರಾಚ್ಯವಸ್ತು ಇಲಾಖೆ.

ಶಿವಕುಮಾರ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.