ADVERTISEMENT

ಸಸಿ ಸಂತೆ: ನಿರೀಕ್ಷೆಗೂ ಮೀರಿ ಸ್ಪಂದನೆ

ಎಂ.ಮಹೇಶ
Published 21 ಜುಲೈ 2017, 7:13 IST
Last Updated 21 ಜುಲೈ 2017, 7:13 IST

ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ ಇಲ್ಲಿನ ಹ್ಯೂಮ್‌ ಉದ್ಯಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಜಿಲ್ಲಾಮಟ್ಟದ ಸಸಿ ಸಂತೆ’ಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ತೋಟಗಾರಿಕೆ ಕೈಗೊಳ್ಳಬೇಕು, ಮನೆಯ ಆವರಣ, ಟೆರೇಸ್‌ ಮತ್ತು ಹಿತ್ತಿಲನ್ನು ಅಲಂಕಾರಿಕ ಗಿಡಗಳಿಂದ ಅಲಂಕರಿಸಬೇಕು, ಹಣ್ಣಿನ ಸಸಿಗಳನ್ನು ಬೆಳೆಸಬೇಕು ಎಂದು ಬಯಸುವವರ ಅನುಕೂಲಕ್ಕಾಗಿ ಎಲ್ಲ ಜಾತಿಯವೂ ಒಂದೇ ಕಡೆಯಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ, ತೋಟಗಾರಿಕಾ ಅಭಿಯಾನದ ಭಾಗವಾಗಿ 5 ದಿನ ಸಂತೆ ವ್ಯವಸ್ಥೆಗೊಳಿಸಲಾಗಿತ್ತು. ಹಲವು ಬಗೆಯ ಸಸಿಗಳನ್ನು ಸಾರ್ವಜನಿಕರಿಗೆ ಪರಿಚಯಿಸಲಾಯಿತು.

ಪಲಪುಷ್ಪ ಪ್ರದರ್ಶನ ಆಯೋಜಿಸುತ್ತಿದ್ದ ಇಲಾಖೆಯು ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಸಸಿ ಸಂತೆಯಲ್ಲಿ ಸಸಿಗಳನ್ನು ಖರೀದಿಸಲು ಅವಕಾಶ ಒದಗಿಸಲಾಗಿತ್ತು. ರಿಯಾಯಿತಿ ದರದಲ್ಲಿ ದೊರೆತ ಸಸಿಗಳನ್ನು ಜನರು ಮುಗಿಬಿದ್ದು ಖರೀದಿಸಿ, ಸಂತೆಯನ್ನು ಯಶಸ್ವಿಗೊಳಿಸಿದ್ದಾರೆ.

20ಸಾವಿರ ಸಸಿ ಮಾರಾಟ: ‘ಸಂತೆ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆಯಿತು. ಮೊದಲ ದಿನವೇ ಬಹಳಷ್ಟು ಸಸಿಗಳು ಮಾರಾಟವಾಗಿದ್ದವು. ನಂತರ ಇನ್ನೊಂದು ಲೋಡ್‌ ತರಿಸಲಾಯಿತು. 20ಸಾವಿರಕ್ಕೂ ಹೆಚ್ಚಿನ ಸಸಿಗಳು ಮಾರಾಟವಾದವು. ₹ 6.50 ಲಕ್ಷ ವರಮಾನ ಇದರಿಂದ ಸಂಗ್ರಹವಾಗಿದೆ’ ಎಂದು ಹಿರಿಯ ಸಹಾಯಕ ನಿರ್ದೇಶಕ ಕಿರಣಕುಮಾರ್‌ ಉಪಾಳೆ ‘ಪ್ರಜಾವಾಣಿ’ ಗೆ ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಖಾನಾಪುರ ತಾಲ್ಲೂಕು ಶೇಡಗಳ್ಳಿ, ಹಿಡಕಲ್‌ ಡ್ಯಾಂ, ಗೋಕಾಕ ತಾಲ್ಲೂಕಿನ ದೂಪದಾಳ, ಸವದತ್ತಿ ತಾಲ್ಲೂಕಿನ ಯಕ್ಕೇರಿ, ಉಗರಗೋಳ, ಕುರುವಿನಕೊಪ್ಪದಲ್ಲಿ ಇಲಾಖೆಯ ನರ್ಸರಿಗಳಿವೆ. ಇಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಸಸಿಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕ 1ರಿಂದ 2 ಲಕ್ಷದಷ್ಟು ಸಸಿಗಳು ಇಲ್ಲಿ ಮಾರಾಟವಾಗುತ್ತವೆ. ಮಳೆಗಾಲದಲ್ಲಿ ಸಸಿಗಳಿಗೆ ಬೇಡಿಕೆ ಕಂಡುಬರುತ್ತದೆ. ಈ ಬಾರಿ ಇಲಾಖೆಯೇ ಜನರ ಬಳಿಗೆ ಬಂದಿತ್ತು. ಸಸಿಗಳಿಗಾಗಿ ನರ್ಸರಿಗೆ ಹೋಗುವುದನ್ನು ತಪ್ಪಿಸಲಾಯಿತು’ ಎಂದು ಹೇಳಿದರು.

‘ಕರಿಬೇವು, ನಿಂಬೆ, ನೇರಳೆ ಸಸಿಗಳು ಹೆಚ್ಚಾಗಿ ಮಾರಾಟವಾದವು. ಮಾವು, ಚಿಕ್ಕು, ತೆಂಗು ಸಸಿಗಳಿಗೂ ಬೇಡಿಕೆ ಇತ್ತು. ಗುಲಾಬಿ, ದಾಸವಾಳದಂಥ ಅಲಂಕಾರಿಕ ಸಸಿಗಳನ್ನು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು. ಈ ಮಳೆಗಾಲ ಮುಗಿಯುವುದರೊಳಗೆ ಮತ್ತೊಮ್ಮೆ ಸಂತೆ ಆಯೋಜಿಸುವ ಉದ್ದೇಶವಿದೆ. ಸಂಚಾರಿ ವಾಹನದಲ್ಲಿ ಸಸಿಗಳ ಮಾರಾಟ ಮುಂದುವರಿದಿದೆ. ಹಳ್ಳಿಗಳಲ್ಲಿ ಸಂತೆ, ಜಾತ್ರೆ ನಡೆಯುವ ಸ್ಥಳದಲ್ಲಿ ವಾಹನದಲ್ಲಿ ಸಸಿಗಳು ಮಾರಾಟಕ್ಕೆ ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಇಲಾಖೆಯು ನಗರಪ್ರದೇಶದ ಜನರಿಗಾಗಿ ಜಾರಿಗೊಳಿಸಿರುವ ಕಿಚನ್‌ ಹಾಗೂ ಟೆರೇಸ್‌ ಗಾರ್ಡನ್‌ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀಜ ಮತ್ತಿತರ ಪರಿಕರ ಒಳಗೊಂಡ ಕಿಟ್‌ ಹಾಗೂ ಉದ್ಯಾನ ನಿರ್ವಹಣೆಯ ತರಬೇತಿಯನ್ನು ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತದೆ. ಈವರೆಗೆ 6,000ಕ್ಕೂ ಹೆಚ್ಚು ಮಂದಿಗೆ ತರಬೇತಿ ಕೊಡಲಾಗಿದೆ. ಸಂತೆಯಲ್ಲಿ ಈ ಯೋಜನೆ ಸೇರಿದಂತೆ ಇಲಾಖೆಯ ಎಲ್ಲ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಡಲಾಯಿತು. ಇಲಾಖೆಯ ನರ್ಸರಿಗಳಲ್ಲಿ ಪ್ರಸ್ತುತ 3.90 ಲಕ್ಷ ಸಸಿಗಳು ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.