ADVERTISEMENT

ಹಳೆಗನ್ನಡ ಕಬ್ಬಿಣದ ಕಡಲೆಯಲ್ಲ: ಕಾಟ್ಕರ್‌

ಆರ್‌ಸಿಯುನಲ್ಲಿ ಹಳೆಗನ್ನಡ ಕಾವ್ಯಕಮ್ಮಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 6:25 IST
Last Updated 20 ಮಾರ್ಚ್ 2018, 6:25 IST

ಬೆಳಗಾವಿ: ‘ಹಳೆಗನ್ನಡ ಕಬ್ಬಿಣದ ಕಡಲೆ ಅಲ್ಲ. ಪದ್ಯಗಳನ್ನು ಒಡೆಯುವ ಹಾಗೂ ಕೂಡಿಸುವ ತಂತ್ರ ಗೊತ್ತಾದರೆ ಅತಿ ಸುಲಭವಾಗಿ ಅರ್ಥವಾಗುತ್ತದೆ. ಕನ್ನಡ ಪ್ರಾಧ್ಯಾಪಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್‌ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿರುವ ಹಳೆಗನ್ನಡ ಕಾವ್ಯಕಮ್ಮಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‌‘ಹಳೆಗನ್ನಡ ಪಠ್ಯವೇ ಬೇಡ ಎಂದು ಪ್ರಾಧ್ಯಾಪಕರು ವಾದ ಮಂಡಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆಧುನಿಕ ಕನ್ನಡವಷ್ಟೇ ಬೇಕು ಎಂದು ಅವರು ಪಟ್ಟುಹಿಡಿದಿದ್ದರು. ಹಳೆಗನ್ನಡ ಇಲ್ಲದ ಸಾಹಿತ್ಯವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ADVERTISEMENT

‘ಹಳೆಗನ್ನಡ ಪಠ್ಯ ಆಂತರಿಕ ಹಾಗೂ ಮಾನಸಿಕ ಪಠ್ಯವಾಗಿ ಪರಿವರ್ತನೆಗೊಳ್ಳಬೇಕು. ಇದರಿಂದ ಜೀವನ ಕ್ರಮವನ್ನು ನೋಡುವುದಕ್ಕೆ ಸುಲಭವಾಗುತ್ತದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅಭಿ‍ಪ್ರಾಯಪಟ್ಟರು.

‘ಅರ್ಥೈಸಿಕೊಳ್ಳುವುದಕ್ಕಾಗಿ ಪ್ರಾಚೀನ ಸಾಹಿತ್ಯದಲ್ಲಿ ಈಜಬೇಕಾಗುತ್ತದೆ ಹಾಗೂ ಪದಗಳೊಂದಿಗೆ ಆಟ ಆಡಬೇಕಾಗುತ್ತದೆ. ಪದ್ಯದ ಸ್ವಾರಸ್ಯ ಗೊತ್ತಾಗಬೇಕಾದರೆ ಅಲಂಕಾರ ತಿಳಿಯಬೇಕು. ಕವಿತೆ ಓದುತ್ತಿದ್ದಂತೆಯೇ ಧ್ಯಾನಸ್ಥರಾಗಬೇಕು. ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದರೆ ಭಾಷೆ, ಸಾಹಿತ್ಯ ಸಂಪತ್ತಿನೊಂದಿಗೆ ಮತ್ತೆ ಪಂಪನನ್ನು ನೆನಪಿಸಿಕೊಂಡಂತಾಗುತ್ತದೆ’ ಎಂದು ನುಡಿದರು.

ಕುಲಪತಿ ಪ್ರೊ.ಶಿವಾನಂದ ಹೊಸಮನಿ ಮಾತನಾಡಿ, ‘ಮಾತೃಭಾಷೆ ಪ್ರೀತಿಸಿದರೆ ತಾಯಿ ಪ್ರೀತಿಸಿದಂತೆ. ಹಳೆಗನ್ನಡ ಇಂದಿಗೂ ಪ್ರಸ್ತುತವಾಗಿದೆ. ಸರಿಯಾಗಿ ತಿಳಿದುಕೊಂಡರೆ ಅದರಷ್ಟು ಸುಲಭದ್ದು ಮತ್ತೊಂದಿಲ್ಲ’ ಎಂದು ಪ್ರತಿಪಾದಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿದರು. ಕುಲಸಚಿವ ಪ್ರೊ.ಸಿದ್ದು ಅಲಗೂರ, ಪ್ರೊ.ರಂಗರಾಜ ವನದುರ್ಗ, ಡೀನ್ ಪ್ರೊ.ಎಸ್.ಎಂ. ಗಂಗಾಧರಯ್ಯ ಇದ್ದರು.

ಮಹೇಶ ಗಾಜಪ್ಪನವರ ಸ್ವಾಗತಿಸಿದರು. ಸಂಯೋಜಕ ಗಜಾನನ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಮೈತ್ರೇಯಿಣಿ ಗದಿಗೆಪ್ಪಗೌಡರ ನಿರೂಪಿಸಿದರು. ಪಿ. ನಾಗರಾಜ ವಂದಿಸಿದರು.

ನಂತರ ‘ಪಂಪನ ಆದಿಪುರಾಣಂ’ ಕುರಿತ ಗೋಷ್ಠಿಯಲ್ಲಿ ವಿಶ್ರಾಂತ ಕುಲಸಚಿವ ಪ್ರೊ.ಶಾಂತಿನಾಥ ದಿಬ್ಬದ, 2ನೇ ಗೋಷ್ಠಿಯಲ್ಲಿ ‘ಪಂಪನ ವಿಕ್ರಮಾರ್ಜುನ ವಿಜಯಂ’ ಬಗ್ಗೆ ಮುಂಬೈನ ವಿವಿ ವಿಶ್ರಾಂತ ಪ್ರಾಧ್ಯಾಪಕ ತಾಳ್ತಾಜೆ ವಸಂತಕುಮಾರ ಉಪನ್ಯಾಸ ನೀಡಿದರು. ಸಂಜಯಕುಮಾರ ಹಾರೋಬಿಡಿ ಹಾಗೂ ಭೈರೋಬಾ ಕಾಂಬಳೆ ನಿರೂಪಿಸಿದರು.
**
ಪದ್ಯಗಳನ್ನು ಸಿಕ್ಕಷ್ಟು ಬಾಚಿಕೊಂಡರೆ ಸಮೃದ್ಧರಾಗುತ್ತೇವೆ. ಧ್ಯಾನಸ್ಥರಾಗಿ ಓದಿ ಅಂತರದಲ್ಲಿ ಇಳಿಸಿಕೊಂಡರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
– ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ವಿಶ್ರಾಂತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.