ADVERTISEMENT

ಹಿರಣ್ಯಕೇಶಿ ನದಿಗೆ ತಡೆಗೋಡೆ: ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 8:43 IST
Last Updated 21 ಏಪ್ರಿಲ್ 2017, 8:43 IST

ಹುಕ್ಕೇರಿ: ಬರಗಾಲದಲ್ಲಿ ತಾಲ್ಲೂಕಿನ ಸುಲ್ತಾನಪುರದ ಸಂಗಮ ಬಳಿ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ ಅಂದಾಜು 15 ಕಿ.ಮೀ ಉದ್ದ, 570 ಅಡಿ ಅಗಲ ಮತ್ತು 8 ರಿಂದ 10 ಅಡಿ ಎತ್ತರ ನೀರನ್ನು ನಿಲ್ಲಿಸಲು ಶ್ರಮಿಸಿದ ಕತ್ತಿ ಸಹೋದರರ ಕಾರ್ಯ ಶ್ಲಾಘನೀಯ ಎಂದು ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ತಡೆಗೋಡೆಯಿಂದ ಬಡಕುಂದ್ರಿಯ ವರೆಗೆ ಸಂಗ್ರಹಿತವಾದ ನೀರನ್ನು ಮಂಗಳವಾರ ವೀಕ್ಷಿಸಿದ ಬಳಿಕ ಅವರು ಈ ಬಗ್ಗೆ ಆನಂದ ವ್ಯಕ್ತಪಡಿಸಿದರು.

ಅಂತರ್ಜಲ ಹೆಚ್ಚಳಕ್ಕೆ ಸಲಹೆ ನೀಡುವ ನಾವು ಅದನ್ನು ಹೆಚ್ಚಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದ ಅವರು ಇಂತಹ ಸಂದರ್ಭದಲ್ಲಿ ಹಿಡಕಲ್ ಜಲಾಶಯದಿಂದ ಹರಿದು ಹೋಗುವ ನೀರಿನ ಕಾಲು ಭಾಗದಷ್ಟು ತಡೆಯಲು ಮಾಜಿ ಸಂಸದ ರಮೇಶ ಕತ್ತಿ, ತಾಲ್ಲೂಕಿನ ಎರಡೂ ಸಕ್ಕರೆ ಕಾರ್ಖಾನೆ ಗಳ ಸಿಬ್ಬಂದಿ ಹಾಗೂ ರೈತರ ಸಹಕಾರ ದೊಂದಿಗೆ ಪ್ರಯತ್ನಿಸಿದ ಶಾಸಕ ಉಮೇಶ ಕತ್ತಿ ಅಭಿನಂದನೆಗೆ ಅರ್ಹರು ಎಂದರು.

ಹೀರಾ ಶುಗರ್ಸ್ ಎಂ.ಡಿ ಡಾ.ಅಶೋಕ ಪಾಟೀಲ, ಯುವ ಧುರೀಣ ಪೃಥ್ವಿ ಕತ್ತಿ ಮತ್ತು ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ ಮಾತನಾಡಿ 14 ಹಳ್ಳಿಯ ಜನ, ಜಾನುವಾರುಗಳಿಗೆ ಕಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸೌಕರ್ಯದ ಜೊತೆಗೆ ಅಂದಾಜು 10 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಕಲ್ಪಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ಈ ಭಾಗದ ರೈತರಿಗೆ ಬೇಸಿಗೆಯಲ್ಲಿ ₹50 ಕೋಟಿ ಹೆಚ್ಚುವರಿ ಆದಾಯ ಮತ್ತು ಕಾರ್ಖಾನೆಗಳಿಗೆ 2 ಲಕ್ಷ ಟನ್ ಹೆಚ್ಚು ಕಬ್ಬು ದೊರಕಲು ಈ ಸಂಗ್ರಹಿತ ನೀರಿನಿಂದ ಸಾಧ್ಯ ಎಂದರು.

ADVERTISEMENT

ಬಾಗಿನ: ಇದೇ ಸಂದರ್ಭದಲ್ಲಿ ಸಂಪತ್ಕುಮಾರ ಶಾಸ್ತ್ರಿಗಳ ಸಮ್ಮುಖದಲ್ಲಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ನಂತರ ಶ್ರೀಗಳು ತಡೆಗೋಡೆ ನಿರ್ಮಾಣಕ್ಕೆ ಶ್ರಮಿಸಿದ ವರನ್ನು ಸತ್ಕರಿಸಿದರು. ಹೀರಾ ಶುಗರ್ಸ್ ಮತ್ತು ವಿಶ್ವರಾಜ ಶುಗರ್ಸ್ ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.