ADVERTISEMENT

ಪ್ರತಿಭೆ ಬೆಳಕಿಗೆ ತಂದ ಆತ್ಮ ತೃಪ್ತಿ ಇದೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 9:14 IST
Last Updated 23 ಜನವರಿ 2018, 9:14 IST

ಗೋಕಾಕ: ಸಾಂಸ್ಕೃತಿಕ ಕ್ಷೇತ್ರದ ಸ್ಥಳೀಯ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳವಣಿಗೆ ಹೊಂದಬೇಕು ಎಂಬ ಉದ್ದೇಶದಿಂದ 17 ವರ್ಷಗಳಿಂದ ಸತೀಶ ಶುಗರ್ಸ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಸಾವಿರ ಪ್ರತಿಭೆಗಳನ್ನು ಬೆಳಕಿಗೆ ತಂದ ತೃಪ್ತಿ ಇದೆ ಎಂದು ಸತೀಶ ಶುಗರ್ಸ್ ಅವಾರ್ಡ್ಸ್‌ ಸ್ಥಾಪಕ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಭಾನುವಾರ ಇಲ್ಲಿಯ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ 4 ದಿನಗಳ 17ನೇ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 17ವರ್ಷದಲ್ಲಿ ಸುಮಾರು ದೇಶದ 60 ಸಾವಿರ ಪ್ರತಿಭೆಗಳು ಬೆಳಕಿಗೆ ಬಂದಿವೆ ಎಂದರು.

ನಾಡಿನ ಎಲ್ಲೆಡೆ ಈ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿರುವುದು ಹೆಮ್ಮೆಯ ವಿಚಾರ. ಇದಕ್ಕೆ ಎಲ್ಲರ ಇನ್ನೂ ಹೆಚ್ಚಿನ ಸಹಕಾರ ಅಗತ್ಯವಾಗಿದೆ‌. ಅಂತಿಮ ಹಂತದಲ್ಲಿ 845 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಜಿಲ್ಲೆ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗ್ರಾಮೀಣ ಪ್ರತಿಭಾವಂತರನ್ನು ಗುರುತಿಸಲು ಈ ವೇದಿಕೆ ಸಹಕಾರಿಯಾಗಿದೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ ಎಂದರು.

ADVERTISEMENT

ರಾಜ್ಯದಲ್ಲಿ ಸಾಂಸ್ಕೃತಿಕ, ಕ್ರೀಡೆ ಹಾಗೂ ಸಾಮಾಜಿಕ ಉದ್ದೇಶಗಳಿಗಾಗಿ ಒಂಭತ್ತು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ನಾಲ್ಕು ಸಾಂಸ್ಕೃತಿಕ ಕಾರ್ಯಕ್ರಮಗಳು, ಒಂದು ದೇಹದಾರ್ಢ್ಯ ಸ್ಪರ್ಧೆ, ದಾವಣಗೆರೆಯಲ್ಲಿ ದಲಿತೋತ್ಸವ, ಪ್ರತಿವರ್ಷ ಡಿಸೆಂಬರ್ 6ರಂದು ಆಚರಿಸುವ ಮೌಢ್ಯ ವಿರೋಧಿ ದಿನ ಆಚರಿಸಲಾಗುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಹಣವನ್ನು ಪ್ರಚಾರ ಬಯಸದೇ ಖರ್ಚು ಮಾಡುತ್ತಿರುವುದು ನಮ್ಮ ವಿಶೇಷ ಎಂದು ಅವರು ನುಡಿದರು.

ಇದೇ ವೇಳೆ ಜಾರಕಿಹೊಳಿ ಅವರಿಗೆ ಹುಬ್ಬಳ್ಳಿಯ ವೈದ್ಯ ಡಾ. ಪ್ರಭು ಬಿರಾದಾರ, ನಗರದ ವೈದ್ಯ ಡಾ. ಎಮ್. ಜಿ ಉಮರಾಣಿ, ಮಹಾದೇವ ಪಾವಟೆ ಹಾಗೂ ಜಗದೀಶ ಉಮರಾಣಿ ವಿಶ್ವಗುರು ಬಸವಣ್ಣನವರ ಬೆಳ್ಳಿ ಮೂರ್ತಿ ನೀಡಿ ಸನ್ಮಾನಿಸಿದರು.

ಹಿರಿಯ ನಟ ಶ್ರೀನಿವಾಸಮೂರ್ತಿ ಮಾತನಾಡಿದರು. ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ, ಪುತ್ರಿ ಪ್ರಿಯಂಕಾ, ಸಂಘಟಕರಾದ ಎಸ್.ಎ. ರಾಮಗಾನಟ್ಟಿ ಹಾಗೂ ರೀಯಾಜ ಚೌಗಲಾ ಇದ್ದರು.

ನಾಲ್ಕನೇ ದಿನದ ಫಲಿತಾಂಶ, ಬಹುಮಾನದ ವಿವರ

ಕಾಲೇಜು ವಿಭಾಗ: ಗಾಯನ– ಗೋಕಾಕ ಎಲ್.ಆರ್.ಜೆ. ಪಿ.ಯು ಕಾಲೇಜಿನ ಕಲ್ಮೇಶ ಉಜ್ಜಿನಕೊಪ್ಪ ಪ್ರಥಮ. ಗೋಕಾಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೂಪಾ ಕಡಗಾಂವಿ ದ್ವೀತಿಯ ಹಾಗೂ ಗೋಕಾಕ ಜೆ.ಎಸ್.ಎಸ್ ಕಾಲೇಜಿನ ವಿಜ್ಞಾನ ವಿಭಾದ ಅಶ್ವಿನಿ ದೇಮಶೆಟ್ಟಿ ತೃತೀಯ.

ಸಮೂಹ ನೃತ್ಯ ಸ್ಪರ್ಧೆ: ಗೋಕಾಕದ ಸತೀಶ ಶುಗರ್ಸ್‌ ಅಕ್ಯಾಡೆಮಿಯ ಪಿ.ಯು. ಕಾಲೇಜಿನ ಹನಮಂತ ಸವದಿ ಮತ್ತು ತಂಡ ಪ್ರಥಮ. ಗೋಕಾಕದ ಎಲ್.ಆರ್.ಜೆ ಪಾಲಿಟೆಕ್ನಿಕ್ ಕಾಲೇಜಿನ ಭೀಮಶಿ ಶ್ರೀಕುಮಾರ ಮತ್ತು ತಂಡ ದ್ವೀತಿಯ ಹಾಗೂ ಗೋಕಾಕ ಜೆ.ಎಸ್.ಎಸ್ ಪಿ.ಯು ಕಾಲೇಜಿನ ಪ್ರೀಯಾಂಕಾ ಸೊಪ್ಪಡ್ಲ ಮತ್ತು ತಂಡ ತೃತೀಯ.

ಪ್ರೌಢಶಾಲಾ ವಿಭಾಗ: ಜಾನಪದ ನೃತ್ಯ– ಹಡಗಿನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅಂಕಿತಾ ಕಲ್ಲೋಳಿ ಹಾಗೂ ಸಂಗಡಿಗರು ಪ್ರಥಮ. ನಾಗನೂರಿನ ಎಂ.ಡಿ.ಆರ್‌ ಶಾಲೆಯ ಸಾರಿಕಾ ಕಟ್ಟಿಮನಿ ಹಾಗೂ ಸಂಗಡಿಗರು ದ್ವಿತೀಯ ಹಾಗೂ ಗೋಕಾಕ ಸರ್ಕಾರಿ ಪಿಯು ಕಾಲೇಜಿನ ಪದ್ಮಾವತಿ ಹಾಗೂ ಸಂಗಡಿಗರು ತೃತೀಯ.

ವಿಜೇತರಿಗೆ ಚಿತ್ರನಟ ಶ್ರೀನಿವಾಸಮೂರ್ತಿ, ವರ್ತಕ ಮಹಾಂತೇಶ ತಾಂವಶಿ ಸೇರಿದಂತೆ ಗಣ್ಯರು ಟ್ರೋಫಿ, ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ 2016-17ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ವಿವಿಧ ಕೋರ್ಸ್‌ಗಳ 23 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ತಲಾ ₹ 10 ಸಾವಿರದಂತೆ ಒಟ್ಟು ₹ 2.30 ಲಕ್ಷ ಮೊತ್ತದ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.