ADVERTISEMENT

ಜೈನ ಉದ್ಯಮಿಗಳಿಗೆ ಉತ್ತೇಜನ: ಜಿತೋ ಅಪೆಕ್ಸ್‌ ನಿರ್ದೇಶಕ ವಿಜಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 12:25 IST
Last Updated 23 ಆಗಸ್ಟ್ 2018, 12:25 IST
ಬೆಳಗಾವಿಯಲ್ಲಿ ಗುರುವಾರ ಆಯೋಜಿಸಿದ್ದ ಜೈನ ಉದ್ಯಮಿಗಳ ಮಿಲನ ಕಾರ್ಯಕ್ರಮವನ್ನು ಜಿತೋ ಅಪೆಕ್ಸ್‌ ನಿರ್ದೇಶಕ ವಿಜಯ ಜೀರಾವಾಲಾ ಉದ್ಘಾಟಿಸಿದರು. ಸತೀಶ ಮೆಹತಾ, ಪಾರಸ್ ಭಂಡಾರಿ, ವಿಕ್ರಮ ಜೈನ, ಹಿಮ್ಮತ್ ಜೈನ ಇದ್ದಾರೆ
ಬೆಳಗಾವಿಯಲ್ಲಿ ಗುರುವಾರ ಆಯೋಜಿಸಿದ್ದ ಜೈನ ಉದ್ಯಮಿಗಳ ಮಿಲನ ಕಾರ್ಯಕ್ರಮವನ್ನು ಜಿತೋ ಅಪೆಕ್ಸ್‌ ನಿರ್ದೇಶಕ ವಿಜಯ ಜೀರಾವಾಲಾ ಉದ್ಘಾಟಿಸಿದರು. ಸತೀಶ ಮೆಹತಾ, ಪಾರಸ್ ಭಂಡಾರಿ, ವಿಕ್ರಮ ಜೈನ, ಹಿಮ್ಮತ್ ಜೈನ ಇದ್ದಾರೆ   

ಬೆಳಗಾವಿ: ಜೈನ ಸಮಾಜದ ಉದ್ಯಮಿಗಳಿಗೆ ಉತ್ತೇಜನ ನೀಡಲು ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ (ಜಿತೋ) ಕಟಿಬದ್ಧವಾಗಿದೆ ಎಂದು ಜಿತೋ ಅಪೆಕ್ಸ್‌ ನಿರ್ದೇಶಕ ವಿಜಯ ಜೀರಾವಾಲಾ ಹೇಳಿದರು.

ಜಿತೊ ಬೆಳಗಾವಿ ವಿಭಾಗದಿಂದ ಗುರುವಾರ ಆಯೋಜಿಸಿದ್ದ ‘ಜೈನ ಉದ್ಯಮಿಗಳ ಮಿಲನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಜೈನ ಸಮಾಜದ ಉದ್ಯಮಿಗಳು ಎಲ್ಲ ರಂಗದಲ್ಲೂ ಇದ್ದಾರೆ. ಆದರೆ, ಪರಸ್ಪರ ಪರಿಚಯ ಇಲ್ಲದ ಕಾರಣ ನಿರೀಕ್ಷೆಗೆ ತಕ್ಕಂತೆ ಉದ್ಯಮವನ್ನು ಬೆಳೆಸುವುದಕ್ಕೆ ಆಗುತ್ತಿಲ್ಲ. ಹೀಗಾಗಿ, ಪರಸ್ಪರ ಪರಿಚಯಕ್ಕೆ ಅನುಕೂಲವಾಗಲಿ ಹಾಗೂ ಪ್ರಗತಿಯ ಕುರಿತು ಸಮಾಲೋಚನೆ ನಡೆಸಲಿ ಎಂಬ ಕಾರಣದಿಂದ ಈ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಭಾರತ ಸೇರಿದಂತೆ ವಿಶ್ವದ 11 ವಿವಿಧ ದೇಶಗಳಲ್ಲಿ ಜಿತೋ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ಶಾಖೆಗಳ ಮೂಲಕ ಉದ್ಯಮಿಗಳು ತಮ್ಮ ವಹಿವಾಟು ನಡೆಸಬಹುದಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು’ ಎಂದು ವಿವರಿಸಿದರು.

ಜಿತೋ ಬೆಂಗಳೂರು ವಿಭಾಗದ ಅಧ್ಯಕ್ಷ ಪಾರಸ್ ಭಂಡಾರಿ ಮಾತನಾಡಿ, ‘ಜೈನ ಉದ್ಯಮಿಗಳ ಅಭಿವೃದ್ಧಿ ಜೊತೆಗೆ ಇಡೀ ಜೈನ ಸಮಾಜದ ಉನ್ನತಿಗಾಗಿ ಜಿತೋ ಸಂಸ್ಥೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಜೈನ ಗ್ಲೋಬಲ್ ಕಾರ್ಡ್‌ ಯೋಜನೆಯಡಿ, ಪ್ರತಿ ಜೈನ ಕುಟುಂಬಕ್ಕೆ ಕಾರ್ಡ್‌ ನೀಡಲಾಗುವುದು. ಇದರಿಂದ ಆಯ್ದ ಅಂಗಡಿ, ಸೂಪರ್ ಮಾರ್ಕೆಟ್, ಆಸ್ಪತ್ರೆಗಳಲ್ಲಿ ರಿಯಾಯತಿ ಪಡೆಯಬಹುದಾಗಿದೆ’ ಎಂದರು.

ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸತೀಶ ಮೆಹತಾ, ಕಾರ್ಯದರ್ಶಿ ವಿಕ್ರಮ ಜೈನ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಹರದಿ, ಯುವ ಘಟಕದ ಅಧ್ಯಕ್ಷ ಅಮಿತ ದೋಷಿ, ಕಾರ್ಯಕ್ರಮ ಸಂಯೋಜಕ ಅಭಿಜಿತ್ ಭೋಜನ್ನವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.