ADVERTISEMENT

ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಅನ್ಯಾಯ ಮಾಡಿಲ್ಲ; ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2018, 15:37 IST
Last Updated 28 ಜುಲೈ 2018, 15:37 IST

ಬೆಳಗಾವಿ: ಸರ್ಕಾರದಲ್ಲಿದ್ದಾಗ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸದ ಬಿಜೆಪಿ, ಈಗ ಏಕಾಏಕಿಯಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸಲು ಹೊರಟಿದೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಆರೋಪಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಕುಮಾರಸ್ವಾಮಿ ಅನ್ಯಾಯ ಮಾಡಿಲ್ಲ. ಸುವರ್ಣ ವಿಧಾನಸೌಧ ಯಾರ ಕಾಲದಲ್ಲಿ ನಿರ್ಮಾಣವಾಗಿತ್ತು ಎನ್ನುವುದನ್ನು ಬಿಜೆಪಿಯವರು ನೆನಪಿಸಿಕೊಳ್ಳಲಿ. ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಬೆಳಗಾವಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನೀಡಿದ್ದಾರೆ ಎಂದು ಹೇಳಿದರು.

ರೈತರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಾಲ ಮನ್ನಾ ಮಾಡಲು ನಿರಾಕರಿಸಿದ್ದರು. ಮಹದಾಯಿ ಪ್ರಕರಣ ಇತ್ಯರ್ಥ ಪಡಿಸುತ್ತೇವೆಂದು ಹೇಳಿ ಹೋದ ಅವರು ಮರಳಿ ಈ ಕಡೆ ತಲೆಹಾಕಿಲ್ಲ. ಇದರ ಬಗ್ಗೆ ಬಿಜೆಪಿ ನಾಯಕರಾರೂ ಚಕಾರ ಎತ್ತುತ್ತಿಲ್ಲ. ಇವರಿಗೆ ನಿಜವಾಗಿಯೂ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದರು.

ADVERTISEMENT

ಶಾಸಕರಾದ ಬಿಜೆಪಿಯ ಉಮೇಶ ಕತ್ತಿ ಹಾಗೂ ಶ್ರೀರಾಮುಲು ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ನಾವು ಅಖಂಡ ಕರ್ನಾಟಕದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು.

ಜಿ.ಎಸ್‌. ಗೋಕಾಕ, ಪ್ರಕಾಶ ಸೋನವಾಲಕರ, ಫೈಜುಲ್ಲಾ ಮಾಡಿವಾಲೆ, ಬಿ.ಎಸ್‌. ರುದ್ರಗೌಡ ಹಾಗೂ ಈರಣ್ಣ ರೇವಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.