ADVERTISEMENT

ಅಂಗನವಾಡಿ ಮಕ್ಕಳಿಗೆ ಒಂದು ಗಂಟೆಯೂ ಶಿಕ್ಷಣ ಸಿಗುತ್ತಿಲ್ಲ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:53 IST
Last Updated 21 ಜನವರಿ 2017, 19:53 IST

ಬೆಂಗಳೂರು: ಮಕ್ಕಳಿಗೆ ಅಂಗನವಾಡಿಗಳಲ್ಲಿ ಒಂದು ಗಂಟೆಯೂ ಶಿಕ್ಷಣ ದೊರೆಯುತ್ತಿಲ್ಲ  ಎಂಬ ಮಾಹಿತಿ ಯುನಿಸೆಫ್ ಹಾಗೂ ಸೆಂಟರ್ ಫಾರ್ ಬಜೆಟ್ ಅಂಡ್‌ ಪಾಲಿಸಿ ಸ್ಟಡೀಸ್ ಸಂಸ್ಥೆಯ ಜಂಟಿ ಅಧ್ಯಯನದಿಂದ ಬಹಿರಂಗವಾಗಿದೆ.

ಅಂಗನವಾಡಿಯಲ್ಲಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಮಾನ ಆದ್ಯತೆ ಸಿಗಬೇಕು. ಆದರೆ,  ಆರೋಗ್ಯಕ್ಕೆ ಮಹತ್ವ ಸಿಗುತ್ತಿದೆಯೇ ಹೊರತು ಶಿಕ್ಷಣಕ್ಕೆ ಇಲ್ಲವಾಗಿದೆ.  ಕನಿಷ್ಠ ಮೂರು ಗಂಟೆಯಾದರೂ ಶಿಕ್ಷಣ ಸಿಗಬೇಕು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸಕಾಲದಲ್ಲಿ ವೇತನ ಸಿಗುತ್ತಿಲ್ಲ. ಅವರನ್ನು ಬೇರೆ ಕೆಲಸಗಳಿಗೆ ಹೆಚ್ಚು ತೊಡಗಿಸುತ್ತಿರುವ ಕಾರಣ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ ಎಂದೂ ವರದಿ ಅಭಿಪ್ರಾಯಪಟ್ಟಿದೆ.

ADVERTISEMENT

ಈಗಿರುವ ವ್ಯವಸ್ಥೆಯನ್ನು ವಿಭಜಿಸಿ 3 ವರ್ಷದ ಒಳಗಿನ ಮಕ್ಕಳಿಗೆ ಒಂದು ವ್ಯವಸ್ಥೆ ಮತ್ತು 3ರಿಂದ 6 ವರ್ಷದ ಮಕ್ಕಳಿಗೆ ಬೇರೊಂದು ವ್ಯವಸ್ಥೆ ರೂಪಿಸುವುದು ಸೂಕ್ತ. ಅಂಗನವಾಡಿ ಕಾರ್ಯವೈಖರಿಯಲ್ಲಿ ಆಡಳಿತಶಾಹಿ ಹಸ್ತಕ್ಷೇಪ ಇರದಂತೆ ನೋಡಿಕೊಳ್ಳಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ ಮತ್ತು ಹಾವೇರಿ ಜಿಲ್ಲೆಗಳ ಆಯ್ದ 100 ಅಂಗನವಾಡಿ ಕೇಂದ್ರಗಳಲ್ಲಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಖುಂಟಿಆ ಶನಿವಾರ ಬಿಡುಗಡೆ ಮಾಡಿದರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕಷ್ಟದ ಕೆಲಸ. ಮಕ್ಕಳ ವಯೋಮಾನಕ್ಕೆ ತಕ್ಕಂತೆ ಶಿಕ್ಷಣ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.