ADVERTISEMENT

ಅಂತರ್ಜಲ ಕುಡಿಯಲು ಅಯೋಗ್ಯ

ಕೆರೆಗಳಿಗೆ ಸೇರುತ್ತಿದೆ ಕೊಳಚೆ ನೀರು: ವಿ.ಬಾಲಸುಬ್ರಮಣಿಯನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:54 IST
Last Updated 21 ಸೆಪ್ಟೆಂಬರ್ 2014, 19:54 IST

ಬೆಂಗಳೂರು: ‘ನಗರದ ಕೆರೆಗಳ ನೀರು ಕಲುಷಿತ­ವಾ­ಗಿರುವುದರಿಂದ ಶೇ 59ರಷ್ಟು ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ’ ಎಂದು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ತಿಳಿಸಿದರು.

‘ಒನ್ ಬೆಂಗಳೂರು ಫಾರ್ ಲೇಕ್ಸ್’ ಸಂಘ­ಟನೆಯು ನಗರದ ಸೆಂಟ್ರಲ್‌ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕೆರೆಗಳ ಸಂರಕ್ಷಣೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ‘ನಗರದಲ್ಲಿರುವ ರಾಜಕಾಲುವೆಗಳ ಮೂಲಕ ಮಳೆ ನೀರಿನೊಂದಿಗೆ ಕೊಳಚೆ ನೀರು ಕೆರೆಗಳಿಗೆ ಸೇರುತ್ತಿದೆ. ಇದರಿಂದ ಅಂತರ್ಜಲ ಕಲುಷಿತ­ಗೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ನಗರದಲ್ಲಿ ನದಿಗಳಿಲ್ಲ. ವೃಷಭಾವತಿ, ಅರ್ಕಾವತಿ ಹೊಳೆಗಳಷ್ಟೇ. ಅವುಗಳಿಂದ ನಗರದ ನೀರಿನ ದಾಹ ತಣಿಸಲು ಸಾಧ್ಯವಿಲ್ಲ. ಆದರೆ, ಇವು ಈಗ ಕೊಳಚೆ ನೀರು ಹರಿಯುವ ಕಾಲುವೆಗಳಾಗಿ ಪರಿವರ್ತನೆ ಹೊಂದಿವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ನಗರದಲ್ಲಿ ಈಗ 196 ಕೆರೆಗಳಷ್ಟೇ ಉಳಿದಿವೆ. ಇವುಗಳ ಉಳಿವಿಗಾಗಿ ನಾಗರಿಕರು ಹೋರಾಟ ಮಾಡಬೇಕು. ನಗರ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

‘ಕೆರೆಗಳಿಗೆ ಮಳೆ ನೀರು ಮಾತ್ರ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ರಾಜ­ಕಾಲುವೆಗಳ ಒತ್ತುವರಿಯಾಗಿದ್ದು, ಅವುಗಳ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯಬೇಕು. ಕೊಳಚೆ ನೀರು ರಾಜಕಾಲುವೆ­ಗಳಿಗೆ ಸೇರದಂತೆ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಕೊಳಚೆ ನೀರು ಶುದ್ಧೀಕರಣ ಘಟಕಗಳ ಸಂಖ್ಯೆ­ಹೆಚ್ಚಿಸಬೇಕು. ಈ ಮೂಲಕ ನಗರದಲ್ಲಿ ಪ್ರತಿದಿನ 1,100 ದಶಲಕ್ಷ ಲೀಟರ್‌ ಶುದ್ಧೀಕರಿಸಬಹುದು’ ಎಂದು ಅವರು ಸಲಹೆ ನೀಡಿದರು.

‘ನಗರದಲ್ಲಿ ಪ್ರತಿವರ್ಷ ಸರಾಸರಿ 850 ಮಿ.ಮೀ. ಮಳೆಯಾಗುತ್ತಿದೆ. ಇದರಲ್ಲಿ ಶೇ 20 ರಷ್ಟು ನೀರು ಮಾತ್ರ ಕೆರೆಗಳಿಗೆ ಸೇರುತ್ತಿದೆ. ಉಳಿದ ನೀರು ವ್ಯರ್ಥವಾಗುತ್ತಿದೆ. ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಕೆ ಮಾಡಿಕೊಂಡರೆ ಅಂತರ್ಜಲ ಮಟ್ಟ ಏರಲಿದೆ’ ಎಂದು ಅಭಿಪ್ರಾಯಪಟ್ಟರು.

‘ಸಿಟಿಜನ್‌ ಆ್ಯಕ್ಷನ್ ಫೋರಂ’ನ ಅಧ್ಯಕ್ಷ ಎನ್.ಎಸ್.ಮುಕುಂದ ಮಾತನಾಡಿ, ‘ಬಿಬಿಎಂಪಿ ವ್ಯಾಪ್ತಿಗೆ ಏಳು ನಗರಸಭೆ ಹಾಗೂ ಒಂದು ಪುರಸಭೆ ಸೇರ್ಪಡೆಯಾದ ಬಳಿಕ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ನಗರಕ್ಕೆ ಪ್ರಸ್ತುತ ದಿನಕ್ಕೆ 600 ದಶಲಕ್ಷ ಲೀಟರ್‌ ಕುಡಿಯುವ ನೀರಿನ ಕೊರತೆ ಇದೆ. ನಗರದ ಹೊರವಲಯಗಳಲ್ಲಿ ವಾರ­ಕ್ಕೊಮ್ಮೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲದ ಅವಲಂಬನೆ ಹೆಚ್ಚಿದೆ’ ಎಂದು ವಿಶ್ಲೇಷಿಸಿದರು.

‘1930ರಲ್ಲಿ ನಗರದ ಆಸುಪಾಸಿನಲ್ಲಿ 3,000 ಕೆರೆಗಳು ಇದ್ದವು. ಅಭಿವೃದ್ಧಿಯ ಹೆಸರಿನಲ್ಲಿ ಬಹುತೇಕ ಕೆರೆಗಳು ಮಾಯವಾಗಿವೆ. ಕೆಲವು ಕೆರೆಗಳು ವಸತಿ ಪ್ರದೇಶಗಳಾಗಿವೆ. ಕೆರೆ­ಗಳು ವಿವಿಧ ಇಲಾಖೆಗಳ ಅಧೀನದಲ್ಲಿವೆ. ಹೀಗಾಗಿ ಸಂರಕ್ಷಣೆ ಸಮರ್ಪಕವಾಗಿ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಕೆರೆಗಳನ್ನು ಒಂದೇ ಇಲಾಖೆ ವ್ಯಾಪ್ತಿಗೆ ತಂದು ಅಭಿವೃದ್ಧಿಪಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.