ADVERTISEMENT

ಅಗರ ಎಸ್‌ಇಜೆಡ್‌ ಸ್ಥಗಿತಕ್ಕೆ ಅಭಿಯಾನ

ವೆಬ್‌ ಜಾಲದಲ್ಲಿ ನಾಗರಿಕರ ಹೋರಾಟಕ್ಕೆ 3,600 ಮಂದಿ ಬೆಂಬಲ l ರಾಜ್ಯ ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 20:20 IST
Last Updated 3 ಜೂನ್ 2015, 20:20 IST

ಬೆಂಗಳೂರು: ನಗರದ ಬೆಳ್ಳಂದೂರು ಹಾಗೂ ಅಗರ ಕೆರೆಗಳ ದಂಡೆಯಲ್ಲಿ ಸಾಗುತ್ತಿರುವ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್‌‌) ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ change-org ವೆಬ್‌ ತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಯೋಜನೆ ಸ್ಥಗಿತಕ್ಕೆ ಕರ್ನಾಟಕ ಸರ್ಕಾರ ಸೇರಿದಂತೆ 11 ಸಂಸ್ಥೆಗಳು ಕ್ರಮ  ಕೈಗೊಳ್ಳಬೇಕು ಎಂದು ಆಗ್ರಹಿಸಿ ಆರಂಭಿಸಿದ ಅಭಿಯಾನಕ್ಕೆ ಈಗಾಗಲೇ 3,600 ಮಂದಿ ಸಹಿ ಹಾಕಿದ್ದಾರೆ. ಕೆರೆಗಳ  ಪುನರುಜ್ಜೀವನ, ನಗರ ಯೋಜನೆ, ಸಂಚಾರ ನಿರ್ವಹಣೆ ಮತ್ತಿತರ ವಿಷಯಗಳಲ್ಲಿ ಸಕ್ರಿಯರಾಗಿರುವ ಬೆಳ್ಳಂದೂರು, ಎಚ್‌ಎಸ್‌ಆರ್‌ ಬಡಾವಣೆ ಹಾಗೂ ಕೋರಮಂಗಲದ ನಾಗರಿಕರು ಈ ಅಭಿಯಾನ ಆರಂಭಿಸಿದ್ದಾರೆ.

‘ಬೆಂಗಳೂರು ಮೂಲದ ಮಂತ್ರಿ ಟೆಕ್‌ಝೋನ್‌ ಪ್ರೈ ಲಿಮಿಟೆಡ್‌ ಹಾಗೂ ಸಲಾರ್‌ಪುರಿಯ ಕಂಪೆನಿಗಳು ಅಗರ ಕೆರೆಯ ದಂಡದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿವೆ. ಇದರಿಂದ ನೀರಿನ ಮೂಲಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಯೋಜನೆಗಳ ವಿರುದ್ಧ ಸ್ಥಳೀಯ ನಾಗರಿಕರು 18 ತಿಂಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಕ್ಷೇತ್ರದ ಪ್ರಭಾವಿಗಳ ವಿರುದ್ಧ ಸಮರೋಪಾದಿಯ ಹೋರಾಟ ಅಗತ್ಯ ಇದೆ. ಇದಕ್ಕಾಗಿ ನಾಗರಿಕರ ಸಹಕಾರ ಅಗತ್ಯ’ ಎಂದು ಮನವಿ ಮಾಡಲಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಈ ಸಂಸ್ಥೆಗಳು ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿವೆ. ಸುಳ್ಳು ದಾಖಲೆಗಳನ್ನು ನೀಡಿ ಜಲಮಂಡಳಿ, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಪರವಾನಗಿ ಪಡೆದಿವೆ ಎಂದು ದೂರಲಾಗಿದೆ.
ನಗರದ ನಾಗರಿಕರಿಗೆ ಜಲಮಂಡಳಿ ಸರಿಯಾಗಿ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ಪ್ರಮುಖ ಪ್ರದೇಶಗಳಾದ ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆಗಳಿಗೂ ಸಮರ್ಪಕ ನೀರು ನೀಡುತ್ತಿಲ್ಲ. ಆದರೆ, ಎಸ್‌ಇಝಡ್‌ ಕಾಮಗಾರಿಗೆ ಪ್ರತಿ ತಿಂಗಳು 150 ದಶಲಕ್ಷ ಲೀಟರ್‌ ನೀರು ನೀಡುವುದಾಗಿ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ನೀತಿ ಸರಿಯಲ್ಲ. ಮೊದಲು ನಾಗರಿಕರಿಗೆ ನೀರು ಪೂರೈಕೆ ಮಾಡಬೇಕು ಎಂದು ತಾಣದಲ್ಲಿ ತಿಳಿಸಲಾಗಿದೆ.

‘ಈ ಯೋಜನೆಯಿಂದ ನೀರಿನ ಹರಿವಿಗೆ ಅಡ್ಡಿಯಾಗಲಿದೆ. ಇದರಿಂದಾಗಿ ಮಳೆಗಾಲದಲ್ಲಿ ಕೋರಮಂಗಲ ಹಾಗೂ ಎಚ್‌ಎಸ್ಆರ್‌ ಬಡಾವಣೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಬೆಳ್ಳಂದೂರು ಕೆರೆ ಬತ್ತಿ ಹೋಗುವ ಅಪಾಯವೂ ಇದೆ’ ಎಂದು ಎಚ್ಚರಿಸಲಾಗಿದೆ.

‘ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ನೇತೃತ್ವದ ತಂಡ 2013ರಲ್ಲಿ ವರದಿ ಸಲ್ಲಿಸಿತ್ತು. ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯೋಜನೆ ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಿದ್ದರು. ಸ್ಥಳೀಯ ನಿವಾಸಿಗಳು 2013ರ ಮಾರ್ಚ್‌ನಲ್ಲಿ ಪ್ರತಿಭಟನೆ ನಡೆಸಿ ಯೋಜನೆಯನ್ನು ನಿಲ್ಲಿಸಲು ಹಕ್ಕೊತ್ತಾಯ ಮಂಡಿಸಿದ್ದರು. ಕಾಮಗಾರಿ ನಿಲ್ಲಿಸುವಂತೆ ಉಪಲೋಕಾಯುಕ್ತರು ನಿರ್ದೇಶನ ನೀಡಿದ್ದರು. ಯೋಜನೆಯಿಂದಾಗುವ ಹಾನಿಯ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕಟ್ಟಡ ನಿರ್ಮಾಣದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬೆಂಗಳೂರು ಮೂಲದ ಮಂತ್ರಿ ಟೆಕ್‌ಝೋನ್‌ ಪ್ರೈ ಲಿಮಿಟೆಡ್‌ ಮತ್ತು ಕೋರ್‌ಮೈಂಡ್‌ ಸಾಫ್ಟ್‌ವೇರ್ ಆ್ಯಂಡ್‌ ಸರ್ವಿಸಸ್‌ ಪ್ರೈ ಲಿಮಿಟೆಡ್‌ ಕಂಪೆನಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಳೆದ ತಿಂಗಳು ₨ 139.85 ಕೋಟಿ ದಂಡ ವಿಧಿಸಿತ್ತು.

ಈ ಎರಡೂ ನಿರ್ಮಾಣ ಸಂಸ್ಥೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿ ಬೆಳ್ಳಂದೂರು ಹಾಗೂ ಅಗರದ ಕೆರೆಗಳಿಗೆ ಹೊಂದಿಕೊಂಡ ಜಾಗದಲ್ಲಿ ಹೋಟೆಲ್‌, ಮಾಲ್‌, ವಿಶೇಷ ಆರ್ಥಿಕ ವಲಯ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿವೆ ಎಂದು ಕೋರಮಂಗಲ, ಎಚ್ಎಸ್‌ಆರ್‌ ಬಡಾವಣೆ, ಬೆಳ್ಳಂದೂರು ಬಡಾವಣೆ ನಾಗರಿಕ ಸಂಘಟನೆಗಳು ನ್ಯಾಯಮಂಡಳಿ ಮೆಟ್ಟಿಲೇರಿದ್ದವು. ರಾಜ ಕಾಲುವೆಗೆ ಸೇರಿದ  2.61ಎಕರೆ ಪ್ರದೇಶ, ಬೆಳ್ಳಂದೂರು ಹಾಗೂ ಅಗರ ಕೆರೆಗಳ ಅಚ್ಚುಕಟ್ಟು ಪ್ರದೇಶ ಒತ್ತುವರಿ ಮಾಡಿವೆ ಎಂದೂ ದೂರಿದ್ದವು.
ಎರಡೂ ಸಂಸ್ಥೆಗಳಿಗೆ ದಂಡ ವಿಧಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತೀರ್ಪಿಗೆ ಸುಪ್ರೀಂ ಕೋರ್ಟ್‌ 10 ದಿನಗಳ ಹಿಂದೆ ತಡೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.