ADVERTISEMENT

ಅಜ್ಞಾತ ಕವಿಯ ವಿಶಿಷ್ಟ ಕವನ ಸಂಕಲನ ‘ರಾಮು ಕವಿತೆಗಳು’ ಬಿಡುಗಡೆ

ಪ್ರಕೃತಿ ಪ್ರಕಾಶನದ ಪ್ರಕಟಣೆಯಲ್ಲಿ ಋತುಮಾನ ಜಾಲತಾಣದ ಸಹಯೋಗ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 13:58 IST
Last Updated 14 ಸೆಪ್ಟೆಂಬರ್ 2017, 13:58 IST
ಅಜ್ಞಾತ ಕವಿಯ ವಿಶಿಷ್ಟ ಕವನ ಸಂಕಲನ ‘ರಾಮು ಕವಿತೆಗಳು’ ಬಿಡುಗಡೆ
ಅಜ್ಞಾತ ಕವಿಯ ವಿಶಿಷ್ಟ ಕವನ ಸಂಕಲನ ‘ರಾಮು ಕವಿತೆಗಳು’ ಬಿಡುಗಡೆ   

ಬೆಂಗಳೂರು: ಸಿದ್ಧಮಾದರಿಯ ಪುಸ್ತಕಬಿಡುಗಡೆಯ ಕಾರ್ಯಕ್ರಮಗಳ ನಡುವೆ ‘ರಾಮು ಕವಿತೆಗಳು’ ಎಂಬ ವಿಶಿಷ್ಟ ಕವನ ಸಂಕಲನ ಬುಧವಾರ ಬಿಡುಗಡೆಯಾಗಿದೆ. ಅಜ್ಞಾತ ಕವಿಯೊಬ್ಬರ ಈ ಕವನ ಸಂಕಲನದ ಬಿಡುಗಡೆಯೂ ಅಷ್ಟೇ ವಿಶಿಷ್ಟವಾಗಿ ನಡೆದಿದೆ. ಹಿರಿಯ ವಿಮರ್ಶಕ ಓ.ಎಲ್‌. ನಾಗಭೂಷಣಸ್ವಾಮಿ ಮತ್ತು ಎಚ್‌.ಎಸ್‌. ರಾಘವೇಂದ್ರರಾವ್‌ ಅವರು ರಾಮು ಕವಿತೆಗಳ ಕುರಿತು ಮಾತನಾಡುವ ಮೂಲಕ ಅಂತರ್ಜಾಲದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದರು.

ಪುಸ್ತಕದ ಕುರಿತು ಮಾತನಾಡಿದ ಓ. ಎಲ್. ನಾಗಭೂಷಣಸ್ವಾಮಿ ‘ಸಾಹಿತ್ಯದಲ್ಲಿ ಆಸಕ್ತಿ ಇರುವವರಷ್ಟೇ ಅಲ್ಲ, ಪದ್ಯ ಬರೆಯಬೇಕು ಎಂಬ ಆಸಕ್ತಿ ಇರುವ ಎಲ್ಲರೂ ಗಮನಕೊಟ್ಟು ಅಭ್ಯಾಸ ಮಾಡಬೇಕಾದಂಥ ಕವನ ಸಂಕಲನವಿದು. ಇಲ್ಲಿಯ ಕವನಗಳಲ್ಲಿ ಪಂಪನ ಧ್ವನಿಯಿದೆ. ಜಾನಪದದ ಧ್ವನಿಯಿದೆ. ಬೇರೆ ಬೇರೆ ಧರ್ಮಗಳ ಧ್ವನಿಯೂ ಕೇಳುತ್ತದೆ. ಅಲ್ಲಾವುದ್ದಿನ್ ಕತೆಗಳನ್ನು ನೆನಪಿಸುವ ಮಾತುಗಳು ಬರುತ್ತವೆ. ಇನ್ನೂ ಏನೇನೆಲ್ಲವೂ ಸೇರಿಕೊಂಡಿವೆ. ಇಷ್ಟು ವರ್ಷದ ಕನ್ನಡ ಸಾಹಿತ್ಯದ ಸಂವಾದದ ಮುಂದುವರಿಕೆಯಾಗಿ ಅಥವಾ ಆ ರಾಗಕ್ಕೆ ತನ್ನ ರಾಗ ಸೇರಿಸುವ, ಕನ್ನಡದಲ್ಲೇ ಹುಟ್ಟಿದ ಕನ್ನಡ ಪರಂಪರೆಯ ಕವಿತೆಗಳು ಅನ್ನುವ ಹಾಗೆ ಈ ಕವಿತೆಗಳು ರೂಪುಗೊಂಡಿವೆ’ ಎಂದು ಹೇಳಿದರು.

ಎಚ್. ಎಸ್. ರಾಘವೇಂದ್ರ ರಾವ್ ಮಾತನಾಡಿ ‘ಇವತ್ತಿನ ಕನ್ನಡ ಕವಿತೆಯ ಸನ್ನಿವೇಶದಲ್ಲಿ ಓದುಗ ಮತ್ತು ಕವಿ ಇಬ್ಬರೂ ಕೂಡ ಕವಿತೆ ಎಂದರೇನು? ಹೇಗೆ? ಎಂಬ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿಕೊಳ್ಳುವಂತೆ ಮಾಡುವ ಕವಿತೆಗಳು ಈ ಸಂಕಲನದಲ್ಲಿವೆ. ಇವು ಒಬ್ಬನ ಕವಿತೆ ಅನ್ನುವುದಕ್ಕಿಂತ ಕನ್ನಡ ಸಮುದಾಯದ ಕವಿತೆಯಾಗುವ ಹಂಬಲ ಇಲ್ಲಿ ಕಾಣುತ್ತದೆ. ಸಮುದಾಯ ಅಂದರೆ ಇಂದು ಇರುವ ಸಮುದಾಯ ಮಾತ್ರವಲ್ಲ. ಬೇರೆ ಬೇರೆಯವರ ಕವನಗಳಲ್ಲಿ, ಸಾಹಿತ್ಯದಲ್ಲಿ ಕನ್ನಡ ಸಮುದಾಯವೆನ್ನುವುದು ಹೇಗೆ ಬೆಳೆದುಕೊಂಡು ಬಂದಿದೆಯೊ ಅದೆಲ್ಲವನ್ನೂ ಒಳಗೊಂಡು ಮತ್ತೆ ಹೊಸದಾಗಿ ಅದನ್ನು ಹುಟ್ಟಿಸುವ ಕೆಲಸಗಳನ್ನು ಈ ಕವಿತೆಗಳು ಮಾಡುತ್ತಿವೆ. ಕವಿಗೆ ಕನ್ನಡ ಕಾವ್ಯದ ಪರಂಪರೆಯ ತಿಳಿವಳಿಕೆ ಹೆಚ್ಚಿದಷ್ಟೂ ಅವನ ಕಾವ್ಯದ ಓದು ಮತ್ತು ಬರವಣಿಗೆ ಹೆಚ್ಚು ಹೆಚ್ಚು ಶ್ರೀಮಂತವಾಗುತ್ತದೆ ಅನ್ನೋದಕ್ಕೆ ಸಾಕ್ಷಿಯಂತೆ ಇಲ್ಲಿನ ಕವಿತೆಗಳಿವೆ’ ಎಂದು ಹೇಳಿದರು.

ADVERTISEMENT

‘ಪ್ರಕೃತಿ ಪ್ರಕಾಶನ’ವು ಪ್ರಕಟಿಸಿರುವ ಈ ಪುಸ್ತಕದ ಬಿಡುಗಡೆಯಲ್ಲಿ ‘ಋತುಮಾನ’ ಜಾಲತಾಣದ ಸಹಯೋಗವೂ ಇದೆ.

ಪ್ರಕೃತಿ ಪ್ರಕಾಶನದ ವಿಕ್ರಮ್‌ ಹತ್ವಾರ್‌ ಮಾತನಾಡಿ, ‘ಈ ಕವಿಯ ಆಶಯದಂತೆ ಪುಸ್ತಕದಲ್ಲಿ ಕವಿಯ ಹೆಸರನ್ನು ನಮೂದಿಸಿಲ್ಲ. ಕನ್ನಡದ ಹಲವಾರು ಮನಸ್ಸುಗಳು ಈ ಕವನಗಳನ್ನ ಆಸ್ವಾದಿಸಿವೆ. ಈ ಪುಸ್ತಕದಿಂದಾಗಿ ಈ ಕವಿ ಸಾಧಿಸಬೇಕಾದದ್ದು ಅಥವಾ ಸಿದ್ಧಪಡಿಸಿಕೊಳ್ಳಬೇಕಾಗಿರುವುದು ಏನೂ ಇಲ್ಲ. ಇನ್ನು ಮುಂದೆ ಈ  ಪ್ರಕಾಶನದ ಮೂಲಕ ಪ್ರಕಟವಾಗುವ ಪುಸ್ತಕಗಳು ಕೇವಲ ಪುಸ್ತಕ ರೂಪದಲ್ಲಿ ಮಾತ್ರವಲ್ಲ, ಆ್ಯಪ್‌, ಆಡಿಯೊ, ದೃಶ್ಯ ರೂಪದಲ್ಲೂ ಜನರನ್ನು ತಲುಪಲಿದೆ’ ಎಂದರು.

ಹಿರಿಯ ರಂಗಕರ್ಮಿ ರಘುನಂದನ್ ಈ ಕವನ ಸಂಕಲನದ ಹಲವಾರು ಕವನಗಳನ್ನು ವಾಚಿಸಿದ್ದಾರೆ. ಆಸಕ್ತರು ಋತುಮಾನ ಡಾಟ್ ಕಾಮ್ ruthumana.com ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಪುಸ್ತಕವನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಬಯಸುವವರು store.ruthumana.com ಗೆ ಭೇಟಿ ಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.