ADVERTISEMENT

ಅನರ್ಹ ಸಂಸ್ಥೆಗಳಿಗೆ ಸ್ಕೈವಾಕ್‌ ಗುತ್ತಿಗೆ ನೀಡಲು ಹುನ್ನಾರ

ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರ ದೂರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 20:20 IST
Last Updated 27 ಫೆಬ್ರುವರಿ 2017, 20:20 IST
ಮಾನ್ಯತಾ ಪಾರ್ಕ್‌ ಬಳಿ ಇರುವ ಸ್ಕೈ ವಾಕ್‌    –ಸಾಂದರ್ಭಿಕ ಚಿತ್ರ
ಮಾನ್ಯತಾ ಪಾರ್ಕ್‌ ಬಳಿ ಇರುವ ಸ್ಕೈ ವಾಕ್‌ –ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನಗರದಲ್ಲಿ 16 ಸ್ಕೈವಾಕ್‌ಗಳನ್ನು  ನಿರ್ಮಿಸಲು ಗುತ್ತಿಗೆ ನೀಡಲು ಅರ್ಹತೆ ಹೊಂದಿಲ್ಲದ ಕಂಪೆನಿಗಳಿಗೆ ಅವಕಾಶ ಮಾಡಿಕೊಡುವ ಹುನ್ನಾರ ನಡೆದಿದೆ’ ಎಂದು ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರ ನಾರಾಯಣ  ದೂರಿದರು.

ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಬಿಬಿಎಂಪಿಗೆ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಕಾಶ್ ಆರ್ಟ್ಸ್‌, ಅಕಾರ್ಡ್, ರಿಪ್ಪಲ್ ಮೀಡಿಯಾ ಸಂಸ್ಥೆಗಳಿಗೆ ಸ್ಕೈವಾಕ್ ನಿರ್ಮಾಣ ಹಾಗೂ ಜಾಹೀರಾತು ಅಳವಡಿಸಲು ಸಿಂಗಲ್ ಪ್ಯಾಕೇಜ್ ಅಡಿ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ ಅವಕಾಶ ಮಾಡಿಕೊಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಬಗ್ಗೆ ಬಿಬಿಎಂಪಿ ನಗರ ಯೋಜನೆ, ಸ್ಥಾಯಿ ಸಮಿತಿ, ಹಣಕಾಸು ಇಲಾಖೆಯ ಗಮನಕ್ಕೂ ತಾರದೆ, ಮಂಗಳವಾರ ನಡೆಯಲಿರುವ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಅನುಮತಿ ಪಡೆದುಕೊಳ್ಳಲು ಅಧಿಕಾರಿಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ’ ಎಂದು ದೂರಿದರು.

‘16 ಪ್ಯಾಕೇಜ್‌ನಲ್ಲಿ ಕರೆಯಬೇಕಿದ್ದ ಟೆಂಡರ್‌ಗಳನ್ನು ಸಿಂಗಲ್ ಪ್ಯಾಕೇಜ್ ಆಗಿ ಪರಿವರ್ತಿಸಿ ನಿರ್ದಿಷ್ಟ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವಲ್ಲಿ ಪಾಲಿಕೆಯ ಎಂಜಿನಿಯರ್‌ಗಳು ಶಾಮೀಲಾಗಿದ್ದಾರೆ. ಈ ಹಿಂದೆ ಬಸ್ ಶೆಲ್ಟರ್ ನಿರ್ಮಾಣ ಪ್ರಕರಣದಲ್ಲಿ ಬಿಬಿಎಂಪಿಯನ್ನು ನ್ಯಾಯಾಲಯದ ಮೆಟ್ಟಿಲು ಏರುವಂತೆ ಮಾಡಿದ್ದ ಪ್ರಕಾಶ್ ಆರ್ಟ್ಸ್‌ ಸಂಸ್ಥೆಗೆ ಸ್ಕೈವಾಕ್ ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದರು.

ಸಭೆಯಲ್ಲಿ ವಿರೋಧ: ‘ಮಂಗಳವಾರ ಬಿಬಿಎಂಪಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಲಿದ್ದೇವೆ’ ಎಂದು ಸಮಿತಿಯ ಸದಸ್ಯ ಗೌತಮ್ ಕುಮಾರ್ ತಿಳಿಸಿದರು.

‘ಜಾಹೀರಾತು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಭಾಕರ್ ಅವರು ಜಾಹೀರಾತು ಕಂಪೆನಿಗಳಿಂದ ಕಿಕ್‌ಬ್ಯಾಕ್ ಪಡೆದಿರುವ ಅನುಮಾನವಿದೆ. ಹಾಗಾಗಿಯೇ, ಸಿಂಗಲ್ ಪ್ಯಾಕೇಜ್ ಟೆಂಡರ್ ಕರೆದು ಅಕ್ರಮವೆಸಗಿದ್ದಾರೆ. ಇವರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು’ ಎಂದರು.

‘ಎರಡು ಸಂಸ್ಥೆಗಳಿಗೆ ಮೂರು   ಪ್ಯಾಕೇಜ್‌ಗಳಲ್ಲಿ 1,650 ಬಸ್ ಶೆಲ್ಟರ್‌ಗಳ ನಿರ್ಮಾಣಕ್ಕೆ 20 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದೆ. ಇಲ್ಲಿಯೂ ಟೆಂಡರ್ ನಿಯಮಾವಳಿ ಉಲ್ಲಂಘಿಸಿ, ಅವ್ಯವಹಾರ ನಡೆಸಲಾಗಿದೆ’ ಎಂದು ದೂರಿದರು.

‘ಒಂದು ವೇಳೆ ಅಧಿಕಾರಿಗಳ ಈ ಪ್ರಸ್ತಾವಕ್ಕೆ ಸಭೆಯಲ್ಲಿ ಅನುಮತಿ ಸಿಕ್ಕಿದ್ದೇ ಆದಲ್ಲಿ, ಕೋರ್ಟ್‌ ಮೆಟ್ಟಿಲೇರಲು ಸಿದ್ಧ’ ಎಂದು ಎಚ್ಚರಿಸಿದರು.
ಖರ್ಚು ವೆಚ್ಚದ ವಿವರವಿಲ್ಲ: ನಗರ ವ್ಯಾಪ್ತಿಯಲ್ಲಿ 2,439 ಅನಧಿಕೃತ ಬೃಹತ್ ಜಾಹೀರಾತು ಫಲಕಗಳ ಪೈಕಿ 1,841 ಜಾಹೀರಾತು  ಫಲಕಗಳನ್ನು ತೆರವುಗೊ ಳಿಸಿರುವುದಾಗಿ  ಹೈಕೋರ್ಟ್‌ನಲ್ಲಿ ಬಿಬಿ ಎಂಪಿ ವರದಿ ಸಲ್ಲಿಸಿದೆ. ಆದರೆ, ಇದಕ್ಕೆ ಮಾಡಿದ ಖರ್ಚು-ವೆಚ್ಚದ ಬಗ್ಗೆ ಮಾಹಿತಿಯನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ನೀಡಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಮೂರು ದಿನಗಳ ಒಳಗಾಗಿ ಎಲ್ಲ ಮಾಹಿತಿಯನ್ನು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.