ADVERTISEMENT

ಅನುದಾನ ಕಡಿತ: ಕೃಷಿ ಸಚಿವ ಬೇಸರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 19:43 IST
Last Updated 6 ಮಾರ್ಚ್ 2015, 19:43 IST

ಬೆಂಗಳೂರು: ‘ರಾಜ್ಯಗಳಿಗೆ ನೀಡುವ ಅನುದಾನವನ್ನು ಶೇ 32ರಿಂದ 42ಕ್ಕೆ ಹೆಚ್ಚಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿ­ಕೊಂಡಿದೆ. ಇದು ಕೇಳುವುದಕ್ಕೆ ಚೆನ್ನಾಗಿಯೇ ಇದೆ. ಆದರೆ, ವಾಸ್ತವವಾಗಿ ಅನುದಾನ ಕಡಿತ ಮಾಡಲಾಗಿದೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಶುಕ್ರವಾರ ಇಲ್ಲಿ ದೂರಿದರು.

‘ಇದರಿಂದಾಗಿ ಜಾರಿಯಲ್ಲಿರುವ ಕೃಷಿ ಸೇರಿದಂತೆ ಇತರ ಸಾಮಾ­ಜಿಕ ಯೋಜನೆಗಳ ಅನುಷ್ಠಾನಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಉದಾಹರಣೆಗೆ ಹೇಳುವುದಾದರೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ ಕಳೆದ ವರ್ಷ ₨ 8,444 ಕೋಟಿ ಮೀಸಲು ಇಟ್ಟಿದ್ದ ಕೇಂದ್ರ ಸರ್ಕಾರ ಈ ವರ್ಷ ಅದನ್ನು ಕೇವಲ ₨ 4,500 ಕೋಟಿಗೆ ಇಳಿಸಿದೆ. ಇದರಿಂದ ಈ ಯೋಜನೆಯಡಿ ರಾಜ್ಯಕ್ಕೆ ಬರುತ್ತಿದ್ದ ₨ 800 ಕೋಟಿ ಅನುದಾನ, 400 ಕೋಟಿಗೆ ಇಳಿಯುವ ಸಾಧ್ಯತೆ ಇದೆ. ಆಹಾರ ಭದ್ರತಾ ಕಾಯ್ದೆ­ಯಡಿ ಎಣ್ಣೆ ಕಾಳುಗಳ ಉತ್ಪಾ­ದನೆಗೆ ಮೀಸಲಿಟ್ಟಿದ್ದ ₨1,830 ಕೋಟಿಯನ್ನು ಈ ಬಾರಿ ₨1,300 ಕೋಟಿಗೆ ಇಳಿಸಲಾಗಿದೆ. ಜಲಾನಯನ ಕಾರ್ಯ­ಕ್ರಮ­ಗಳ ಸಲುವಾಗಿ ಕಳೆದ ಬಾರಿ ಇಟ್ಟಿದ್ದ ₨2,488 ಕೋಟಿ-­ಯನ್ನು ಈಗ ₨1,500 ಕೋಟಿಗೆ ಕಡಿತ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ನೀರಾವರಿ ಉಪ ಯೋಜನೆಗಳಿಗೆ ನೀಡುತ್ತಿದ್ದ ಅನುದಾನ­ವನ್ನು ₨3,276 ಕೋಟಿಯಿಂದ ಒಂದು ಸಾವಿರ ಕೋಟಿಗೆ,  ಕೃಷಿ ಉನ್ನತಿ ಯೋಜನೆ ಅನುದಾನವನ್ನು ₨14,173 ಕೋಟಿ­ಯಿಂದ 9 ಸಾವಿರ ಕೋಟಿಗೆ ಇಳಿಸಲಾಗಿದೆ. ಇವೆಲ್ಲ­ವನ್ನೂ ನೋಡುತ್ತಿದ್ದರೆ, ಕೇಂದ್ರ ಸರ್ಕಾರ ಈ ಕೈಯಲ್ಲಿ ಕೊಟ್ಟು, ಆ ಕೈಯಲ್ಲಿ ಕಿತ್ತುಕೊಂಡಂತಾಗಿದೆ. ಇದರಿಂದ ರಾಜ್ಯಕ್ಕೆ ಯಾವ ಪ್ರಯೋಜನವೂ ಇಲ್ಲ’ ಎಂದು  ಆಕ್ಷೇಪಿಸಿದರು.

‘ರಾಜ್ಯಗಳಿಗೆ ಶೇ 10ರಷ್ಟು ಅನುದಾನ ಜಾಸ್ತಿ ಮಾಡಿ, ವಿವಿಧ ಯೋಜನೆಗಳಿಗೆ ನೇರವಾಗಿ ನೀಡುತ್ತಿದ್ದ ಅನುದಾನ­ವನ್ನು ಶೇ 50ರಷ್ಟು ಕಡಿತ ಮಾಡಲಾಗಿದೆ. ಜಾರಿಯಲ್ಲಿರುವ ಯೋಜನೆಗಳನ್ನು ಮುಂದುವರಿಸಬೇಕಾದರೆ ಅದಕ್ಕೆ ರಾಜ್ಯ ಸರ್ಕಾರ ಹಣ ನೀಡಬೇಕಾಗುತ್ತದೆ.

ಇಲ್ಲದಿದ್ದರೆ ಹಲವು ಯೋಜನೆಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಬರಬಹುದು. ಈ ಸಂಬಂಧ ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗಿದೆ’ ಎಂದು ಅವರು ವಿವರಿಸಿದರು. ಹನಿ ನೀರಾವರಿಗೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದ್ದ ಕೇಂದ್ರ ಸರ್ಕಾರ ಇತ್ತೀಚೆಗೆ ಅದನ್ನು ದಿಢೀರ್‌ ಶೇ 35ಕ್ಕೆ ಇಳಿಸಿದೆ. ಇದರ ಹೊರೆ ಕೂಡ ರಾಜ್ಯ ಸರ್ಕಾರದ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು.

‘ಕೃಷಿ ಕರ್ಮಣ್‌’ ಗೌರವ
ಎಣ್ಣೆ ಕಾಳುಗಳ ಉತ್ಪಾದನೆ­ಯಲ್ಲಿ ಉತ್ತಮ ಸಾಧನೆ ತೋರಿದ ಕಾರಣ ಕೇಂದ್ರ ಸರ್ಕಾರ 2013–14ನೇ ಸಾಲಿನ ‘ಕೃಷಿ ಕರ್ಮಣ್’ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯು ₨ 1 ಕೋಟಿ ನಗದು ಮತ್ತು ನೆನಪಿನ ಕಾಣಿಕೆ ಹೊಂದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಇದೇ ರೀತಿ ಜಲಾನಯನ ಇಲಾಖೆ­ಯಲ್ಲಿನ ಉತ್ತಮ ಸಾಧನೆಗೂ ಕೇಂದ್ರ ಗ್ರಾಮೀಣಾಭಿ­ವೃದ್ಧಿ ಇಲಾಖೆ ಪ್ರಶಸ್ತಿ ನೀಡಿದೆ ಎಂದು ಹೇಳಿದರು. ಪ್ರಶಸ್ತಿ ಬರಲು ಕಾರಣರಾದ ಇಲಾಖೆ ಸಿಬ್ಬಂದಿ­ಯನ್ನು ಸಚಿವರು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT