ADVERTISEMENT

ಅಪರಾಧ ಸಾಬೀತು: ಮೂವರಿಗೆ ಕಠಿಣ ಜೈಲುಶಿಕ್ಷೆ

ದರೋಡೆಗೆ ಹೋಗಿ ಮನೆಯೊಡತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 20:02 IST
Last Updated 11 ಫೆಬ್ರುವರಿ 2016, 20:02 IST

ಬೆಂಗಳೂರು: ಮನೆಗೆ ನುಗ್ಗಿದ ದರೋಡೆಕೋರರ ಪೈಕಿ ಒಬ್ಬಾತ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ  ಬಗ್ಗೆ ಹತ್ತು ವರ್ಷದ ಬಾಲಕ ನೀಡಿದ ಹೇಳಿಕೆ ಆಧರಿಸಿ ನಗರದ ಸೆಷನ್ಸ್ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಬುಧವಾರ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

2012ರ ಜೂನ್ 22ರಂದು ಹಲಸೂರು ಠಾಣೆ ವ್ಯಾಪ್ತಿಯಲ್ಲಿ ರಾಜಸ್ತಾನ ಮೂಲದ ವೈದ್ಯರ ಪತ್ನಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಅದೇ ದಿನ ಮೂವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಅವರ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮೊದಲನೇ ಅಪರಾಧಿ ಅಯ್ಯಪ್ಪ ಎಂಬಾತನಿಗೆ 11 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹ 2.10 ಲಕ್ಷ ದಂಡ, 2ನೇ ಅಪರಾಧಿ ಮಲ್ಲಿಕಾರ್ಜುನ ಮತ್ತು 3ನೇ ಅಪರಾಧಿ ಸುಧಾಕರ್‌ಗೆ 10 ವರ್ಷ ಜೈಲು, ತಲಾ ₹ 1.10 ಲಕ್ಷ ದಂಡ ವಿಧಿಸಿದೆ. ಜತೆಗೆ ದಂಡದ ಮೊತ್ತದಲ್ಲಿ ₹ 2.11 ಲಕ್ಷವನ್ನು ಸಂತ್ರಸ್ತೆಗೆ ನೀಡುವಂತೆ ನಿರ್ದೇಶಿಸಿದೆ.

ಏನಿದು ಪ್ರಕರಣ:  ‘ಪತಿ ಮೃತಪಟ್ಟ ನಂತರ ಮಹಿಳೆ (ಸಂತ್ರಸ್ತೆ) 10 ವರ್ಷದ ಪುತ್ರ ಹಾಗೂ ತನ್ನ 81 ವರ್ಷದ ತಾಯಿಯ ಜತೆ ಹಲಸೂರು ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ನೆಲೆಸಿದ್ದರು.

2012ರ ಜೂ.22ರ ಬೆಳಿಗ್ಗೆ 5.30ರ ಸುಮಾರಿಗೆ ಮನೆಗೆ ನುಗ್ಗಿದ್ದ ಅಯ್ಯಪ್ಪ ಮತ್ತು ಮಲ್ಲಿಕಾರ್ಜುನ, ಕುಟುಂಬ ಸದಸ್ಯರನ್ನು ಚಾಕುವಿನಿಂದ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. 3ನೇ ಅಪರಾಧಿ ಸುಧಾಕರ್, ಯಾರಾದರೂ ಬಂದರೆ ಸುಳಿವು ನೀಡಲು ಹೊರಗೆ ಕಾಯುತ್ತಿದ್ದ.

ಒಳಗೆ ಹೋದ ಕೂಡಲೇ ಅಯ್ಯಪ್ಪ, ಹಣ–ಒಡವೆ ಇಟ್ಟಿರುವ ಅಲ್ಮೆರಾ ತೋರಿಸುವಂತೆ ಮಹಿಳೆಯನ್ನು ಕೋಣೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಅವರ ಕೈ–ಕಾಲು ಕಟ್ಟಿ ಅತ್ಯಾಚಾರ ಎಸಗಿದ್ದ.  ಮಲ್ಲಿಕಾರ್ಜುನ ಅಜ್ಜಿ–ಮೊಮ್ಮಗನನ್ನು ಬೆದರಿಸುತ್ತಾ ನಡುಮನೆಯಲ್ಲೇ ಇದ್ದ.

ಸ್ವಲ್ಪ ಸಮಯದ ನಂತರ ಮಲ್ಲಿಕಾರ್ಜುನನ ಸೂಚನೆಯಂತೆ ಅಜ್ಜಿ ಟೀ ಮಾಡಿಕೊಂಡು ಬರಲು ಅಡುಗೆ ಮನೆಗೆ ಹೋಗಿದ್ದರು. ಅಲ್ಲಿಂದ ಹಿಂಬಾಗಿಲ ಮೂಲಕ ಹೊರಗೆ ಓಡಿ ಸಾರ್ವಜನಿಕರನ್ನು ನೆರವಿಗೆ ಕೂಗಿ ಕರೆದಿದ್ದರು.

ಇದನ್ನು ಅರಿತ ದರೋಡೆಕೋರರು, ಮೊಮ್ಮಗನನ್ನು ಶೌಚಾಲಯದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡು ಪ್ರಾಣ ಬೆದರಿಕೆ ಹಾಕಿದ್ದರು. ನಂತರ ಸ್ಥಳಕ್ಕೆ ಬಂದ ಇನ್‌ಸ್ಪೆಕ್ಟರ್ ಮಹಾನಂದ್ ನೇತೃತ್ವದ ತಂಡ, ಹಾರೆಯಿಂದ ಬಾಗಿಲು ಮುರಿದು ಬಾಲಕನನ್ನು ರಕ್ಷಿಸಿದ್ದತ್ತು. ನಂತರ ಅಲ್ಲೇ ಮೂವರೂ ಆರೋಪಿಗಳನ್ನು ಬಂಧಿಸಿತ್ತು.

ಮೊಮ್ಮಗನ ಹೇಳಿಕೆ: ಮುಸುಕು ಧರಿಸಿ ಬಂದ ಇಬ್ಬರು 2 ಗಂಟೆಗಳ ಕಾಲ ತಾಯಿ–ಅಜ್ಜಿ ಹಾಗೂ ತನ್ನ ಜತೆ ನಡೆದುಕೊಂಡಿದ್ದನ್ನು 10 ವರ್ಷದ ಬಾಲಕ ನ್ಯಾಯಾಧೀಶರ ಎದುರು ವಿವರಿಸಿದ್ದ. ಆತನ ಹೇಳಿಕೆ ಜತೆಗೆ ಸಂತ್ರಸ್ತೆ, ಅವರ ತಾಯಿ, ಸ್ಥಳೀಯರು, ತನಿಖಾಧಿಕಾರಿಗಳ ಹೇಳಿಕೆಗಳು ಹಾಗೂ ಬಂಧಿತರ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪರಿಗಣಿಸಿ ನ್ಯಾಯಾಲಯ ಕಠಿಣ ಶಿಕ್ಷೆ ಪ್ರಕಟಿಸಿತು.

ಮನೆ ಬಳಿ ಇದ್ದ
ಅಯ್ಯಪ್ಪ, ಸಂತ್ರಸ್ತೆಯ ಮನೆ ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಮಹಿಳೆ–ವೃದ್ಧೆ ಹಾಗೂ ಮಗು ಮಾತ್ರ ಇರುವ ಮನೆ. ಸುಲಭವಾಗಿ ದರೋಡೆ ಮಾಡಬಹುದೆಂದು ಸಂಚು ರೂಪಿಸಿ, ಸಹಚರರ ಜತೆಗೂಡಿ ಈ ಕೃತ್ಯ ಎಸಗಿದ್ದ.

‘ಮತ್ತೊಬ್ಬನೂ ಅತ್ಯಾಚಾರಕ್ಕೆ ಯತ್ನಿಸಿದ’
‘ತಂಡದಲ್ಲಿ 15 ಮಂದಿ ಇದ್ದೇವೆ. ಅವರಿಗೆಲ್ಲ ಸಮನಾಗಿ ಹಣ ಹಂಚಬೇಕು.₹ 40 ಲಕ್ಷ ಕೊಡು ಎಂದು ಅಯ್ಯಪ್ಪ ಕೇಳಿದ್ದ. ಅಷ್ಟು ಹಣ ಇಲ್ಲವೆಂದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಆತ ನಡುಮನೆಗೆ ಹೋದ ನಂತರ ಒಳಬಂದ ಮಲ್ಲಿಕಾರ್ಜುನನೂ ಅತ್ಯಾಚಾರಕ್ಕೆ ಯತ್ನಿಸಿದ್ದ. ಅದಕ್ಕೆ ಅವಕಾಶ ನೀಡಲಿಲ್ಲ’ ಎಂದು ಸಂತಸ್ತೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.