ADVERTISEMENT

ಅಪ್ಪನ ಅಪ್ಪುಗೆಯಿಂದ ನಲಿದಾಡಿದ ಮಗಳು

ಹೆತ್ತವರನ್ನು ಅರಸುತ್ತಾ ಸ್ವೀಡನ್‌ನಿಂದ ಬೆಂಗಳೂರಿಗೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:48 IST
Last Updated 24 ಅಕ್ಟೋಬರ್ 2016, 19:48 IST
ಹೊಸ ಕುಟುಂಬದೊಂದಿಗೆ ಜ್ಯೋತಿ
ಹೊಸ ಕುಟುಂಬದೊಂದಿಗೆ ಜ್ಯೋತಿ   

ಬೆಂಗಳೂರು: ‘23 ವರ್ಷದಿಂದ ಹೆತ್ತವರನ್ನು ಕಾಣದೆ ನನ್ನೊಳಗೆ ಹುದುಗಿದ್ದ ನೋವು ತಂದೆಯನ್ನು ಅಪ್ಪಿಕೊಳ್ಳುವ ಮೂಲಕ ಮರೆಯಾಗಿದೆ’
–ಇದು ಜನ್ಮ ನೀಡಿದ ತಂದೆ–ತಾಯಿಯನ್ನು ಅರಸಿಕೊಂಡು ಸ್ವೀಡನ್‌ನಿಂದ ಬೆಂಗಳೂರಿಗೆ ಬಂದಿದ್ದ ಜ್ಯೋತಿ ಶವಾನ್ ಅವರು ಸೋಮವಾರ ಕುಮಾರಸ್ವಾಮಿ ಬಡಾವಣೆಯಲ್ಲಿ ತಮ್ಮ ತಂದೆ ದಶರಥ ರಾವ್‌ ಅವರನ್ನು ಭೇಟಿ ಮಾಡಿದಾಗ ಆಡಿದ ಮಾತು.

ಜ್ಯೋತಿ ಶವಾನ್ ಹುಟ್ಟಿದ್ದು ಬೆಂಗಳೂರಿನಲ್ಲಿ. ಆಕೆ ಐದು ವರ್ಷ ಇದ್ದಾಗ ಸ್ವೀಡನ್ ದಂಪತಿ ಆಕೆಯನ್ನು ದತ್ತು ಪಡೆದು, ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿದ್ದರು. ‘ಜ್ಯೋತಿ ಅವರ ತಾಯಿ ಕಮಲಬಾಯಿ, ಗಂಡ ಮತ್ತು ಮಗ ಮಾರುತಿ ತೊರೆದು ಹೋದ ನಂತರ ಮಕ್ಕಳನ್ನು ಪಾಲನೆ ಮಾಡಲು ಸಾಧ್ಯವಾಗದೆ 1993ರಲ್ಲಿ ತಮ್ಮ ಇಬ್ಬರು ಪುತ್ರಿಯರನ್ನು  ದತ್ತು ನೀಡಿದ್ದರು’ ಎಂದು ಆಶ್ರಯ ಚೈಲ್ಡ್ ಹೋಂ ಸಂಸ್ಥೆ ಹೇಳಿದೆ.

‘ಮೂರು ವರ್ಷಗಳ ನನ್ನ ಗೊಂದಲ, ಆತಂಕ ತಂದೆಯನ್ನು ಭೇಟಿ ಮಾಡುವ ಮೂಲಕ ನಿರಾಳವಾಗಿದೆ. ನನ್ನನ್ನು ನೋಡಿದ ತಕ್ಷಣ ಅಪ್ಪ ಖುಷಿಯಿಂದ ನಗಲು ಪ್ರಾರಂಭಿಸಿದರು. ಅವರು ಸಹೃದಯದಿಂದ ಕೂಡಿದ ವ್ಯಕ್ತಿ’ ಎಂದು ಜ್ಯೋತಿ ಸಂತೋಷದಿಂದ ತಮ್ಮ ತಂದೆ ಬಗ್ಗೆ ವರ್ಣಿಸಿದರು.

‘ಅವರ ಚರ್ಮದ ಬಣ್ಣ ಬಿಳಿ, ನನ್ನದು ಹಾಗಲ್ಲ’ ಎಂದು ಸದಾ ಅನ್ನಿಸುತ್ತಿತ್ತು. ತಮ್ಮನ್ನು ದತ್ತು ಪಡೆದಿದ್ದಾರೆ ಎಂಬ ನ್ನನ್ನ ವಿಚಾರ ಗೊತ್ತಾದ ತಕ್ಷಣ ಜ್ಯೋತಿ ಅವರಿಗೆ ತಮ್ಮ ಜನ್ಮನೀಡಿದ ಪೋಷಕರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಉಂಟಾಯಿತು.

ಜ್ಯೋತಿ ಅವರು ಸ್ವೀಡಿಷ್‌ ಪೋಷಕರಾದ ಟಾಮಿ ಮತ್ತು ಗನ್ವೋರ್ ಅವರೊಂದಿಗೆ 2013ರಿಂದ ನಗರದಲ್ಲಿ ತಂದೆ–ತಾಯಿಯರಿಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ನಂತರ ‘ಸಖಿ’ ಸ್ವಯಂಸೇವ ಸಂಸ್ಥೆ, ಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುವ ಪುಣೆ ಮೂಲದ ಸಂಸ್ಥೆ ಹಾಗೂ ನೆದರ್ಲೆಂಡ್‌ ಮೂಲದ ಸಂಸ್ಥೆ ಜ್ಯೋತಿ ಅವರ ಹುಡುಕಾಟಕ್ಕೆ ಕೈಜೋಡಿಸಿತ್ತು. 

ಜ್ಯೋತಿ ಅವರ ತಾಯಿ ಈಗ ಬದುಕಿಲ್ಲ. ರಾವ್‌ ಅವರು ಮರುಮದುವೆ ಆಗಿದ್ದು ಅವರಿಗೆ ಒಬ್ಬಳು ಮಗಳಿದ್ದಾಳೆ. ‘ನನ್ನ ಹೆಂಡತಿ ನನ್ನನ್ನು ಬಿಟ್ಟು ಹೋದ ನಂತರ ಅವರಿಗಾಗಿ ಹುಡುಕಾಟ ನಡೆಸಿದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ. ನನ್ನ ಮಕ್ಕಳನ್ನು ಮತ್ತೆ ನೋಡುತ್ತೇನೆ ಎಂದು ಯೋಚಿಸಿಯೂ ಇರಲಿಲ್ಲ’ ಎಂದು ರಾವ್‌ ಅವರು ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಮತ್ತು ಬರಹಗಾರರಾಗಿರುವ ಜ್ಯೋತಿ ಅವರು ಮುಂದಿನ ವರ್ಷ ಭಾರತಕ್ಕೆ ವಾಪಸ್‌ ಆಗುವ ಬಗ್ಗೆ ಚಿಂತಿಸುತ್ತಿದ್ದಾರೆ. ‘ನನ್ನ ತಂಗಿಯೂ ಭಾರತಕ್ಕೆ ಭೇಟಿ ನೀಡಿ ತಂದೆಯನ್ನು ಕಾಣಲು ಉತ್ಸುಕಳಾಗಿದ್ದಾಳೆ’ ಎಂದು ಜ್ಯೋತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.