ADVERTISEMENT

ಅಪ್ಪಾಜಿಗೌಡ ರಾಜೀನಾಮೆಗೆ ಒತ್ತಾಯ

ಖಜಾಂಚಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 20:33 IST
Last Updated 25 ಜುಲೈ 2015, 20:33 IST

ಬೆಂಗಳೂರು: ‘ಒಕ್ಕಲಿಗರ ಸಂಘದ ಖಜಾಂಚಿ ಉಲ್ಲೂರು ಸಿ. ಮಂಜುನಾಥ್ ಅವರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಹಿಂದೆ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಅವರ ಕೈವಾಡವಿದೆ’ ಎಂದು ಆರೋಪಿಸಿ ಮಂಜುನಾಥ್ ಬೆಂಬಲಿಗರು ಒಕ್ಕಲಿಗರ ಭವನದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಶನಿವಾರ ಬೆಳಿಗ್ಗೆ ವಿ.ವಿ.ಪುರದ ಒಕ್ಕಲಿಗರ ಭವನದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ‘ಯಾವುದೇ ತಪ್ಪು ಮಾಡದಿದ್ದರೂ ಮಂಜುನಾಥ್ ಅವರನ್ನು ಅವಮಾನಿಸಲಾಗಿದೆ. ಇದು ಅಪ್ಪಾಜಿಗೌಡ ಅವರದ್ದೇ ಕುತಂತ್ರ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯ ಮುನ್ಸೂಚನೆ ಅರಿತಿದ್ದ ಸಂಘದ ಪದಾಧಿಕಾರಿಗಳು ಮೊದಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಘೋಷಣೆ ಕೂಗುತ್ತಾ ಸಂಘದ ಕಚೇರಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಅಡ್ಡಗಟ್ಟಿದ್ದರಿಂದ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.

ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ₹ 65 ಲಕ್ಷ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ವೆಂಕಟೇಶ್ ಎಂಬಾತ ಸಹಚರರ ಜತೆ ಸೇರಿಕೊಂಡು ಜುಲೈ 20ರಂದು ಮಂಜುನಾಥ್ ಅವರಿಗೆ ಚಪ್ಪಲಿ ಹಾರ ಹಾಕಿದ್ದ. ಈ ಸಂಬಂಧ ಸೆಂಟ್ರಲ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವೆಂಕಟೇಶ್ ಮತ್ತು ಆತನ ಸಹಚರ ದಾಸ್ ಎಂಬಾತನನ್ನು ಬಂಧಿಸಿದ್ದರು.
*
‘ತನಿಖೆಗೆ ನಾನು ಸಿದ್ಧ’
‘ನಾನು ₹ 50 ಸಾವಿರ ಕೊಟ್ಟು ಚಪ್ಪಲಿ ಹಾರ ಹಾಕಿಸಿದ್ದಾಗಿ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ವೆಂಕಟೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ಪಾರದರ್ಶಕ ತನಿಖೆ ನಡೆಸಲಿ. ನನ್ನ ಪಾತ್ರ ಸಾಬೀತಾದರೆ, ತಕ್ಷಣವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಅಪ್ಪಾಜಿಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.