ADVERTISEMENT

ಅಭಿಪ್ರಾಯ ಸಂಗ್ರಹಕ್ಕೆ ಕಾಲಾವಕಾಶ: ಆಗ್ರಹ

ಕಸ್ತೂರಿ ರಂಗನ್ ವರದಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 20:05 IST
Last Updated 25 ನವೆಂಬರ್ 2014, 20:05 IST

ಬೆಂಗಳೂರು: ‘ಕಸ್ತೂರಿ ರಂಗನ್ ವರದಿ ಕುರಿತು ಅಭಿಪ್ರಾಯ ಮಂಡಿಸಲು ಸರ್ಕಾರ ರಚಿಸಿರುವ ರಾಜ್ಯ ಮಟ್ಟದ ಸಮಿತಿ ಪರಿಸರಸೂಕ್ಷ್ಮ ಹಳ್ಳಿಗಳ ಕುರಿತು ಜನರ ಅಭಿಪ್ರಾಯ ಪಡೆಯಬೇಕು. ಇದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಬೇಕು’ ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಆಗ್ರಹಿಸಿದರು.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ­ಯಲ್ಲಿ ಅವರು ಮಾತನಾಡಿ, ‘ಅಧಿಕಾ­ರಿ­ಗಳು ಕಸ್ತೂರಿ ರಂಗನ್ ವರದಿಯ ಬಗ್ಗೆ ಪಶ್ಚಿಮ ಘಟ್ಟದ ಜನರಿಗೆ ಸರಿಯಾದ ಮಾಹಿತಿ  ನೀಡ­ಬೇಕು. ನಂತರ ಜನರಲ್ಲಿ ಅರಿವು ಮೂಡಿ­ಸುವ ಕೆಲಸ ಮಾಡ­ಬೇಕು. ಯಾವುದೇ ಕಾರಣಕ್ಕೂ ಪಶ್ಚಿಮ ಘಟ್ಟದ ಜನರನ್ನು ಒಕ್ಕಲೆಬ್ಬಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು’.

‘ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಹಳ್ಳಿಗಳನ್ನು ಪಟ್ಟಿ ಮಾಡಲು ರಾಜ್ಯ, ಜಿಲ್ಲಾ ಮತ್ತು ಗ್ರಾಮ ಮಟ್ಟದ ಸಮಿತಿ ಸಭೆ ನಡೆಸಲು ಸರ್ಕಾರವು ಆದೇಶ ನೀಡಿದೆ. ಗ್ರಾಮ ಮತ್ತು ಜಿಲ್ಲಾ ಮಟ್ಟದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ವಾಸ್ತವವನ್ನು ತಿಳಿಸುತ್ತಿಲ್ಲ’ ಎಂದು ದೂರಿದರು.

‘ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಸಮಿತಿಗಳಲ್ಲಿ ಸರ್ಕಾರದ ಐದು  ಅಧಿಕಾರಿಗಳು ಮಾತ್ರ ಇದ್ದಾರೆ.  ಸಮಿತಿಯಲ್ಲಿ ಪರಿಸರ ತಜ್ಞರೇ ಇಲ್ಲ’ ಎಂದು ಆರೋಪಿಸಿದರು.

‘ರಾಜ್ಯದ ಪಶ್ಚಿಮ ಘಟ್ಟದ 1576 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಹಳ್ಳಿಗಳು ಎಂದು ಕಸ್ತೂರಿ ರಂಗನ್ ವರದಿಯು ಗುರುತಿಸಿದೆ. ಹೀಗೆ ಗುರುತಿಸಿರುವ ಸೂಕ್ಷ್ಮ ಪರಿಸರ ಹಳ್ಳಿಗಳಲ್ಲಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ, ಬೃಹತ್ ಕೈಗಾರಿಕೆ ಮತ್ತು ಉಷ್ಣ ಸ್ಥಾವರ ಸ್ಥಾಪಿಸುವಂತಿಲ್ಲ. ಆದರೆ, ಕೆಲ ಪಟ್ಟಭದ್ರ ವ್ಯಕ್ತಿಗಳು ಪರಿಸರ ಸೂಕ್ಷ್ಮ ಹಳ್ಳಿಗಳ ಘೋಷಣೆ ಮಾಡಿದರೆ  ಅಭಿವೃದ್ಧಿ­ಯಾ­ಗು­ವು­ದಿಲ್ಲ, ಕಾಡಿಗೆ ಹೋಗಲು ಬಿಡು­ವುದಿಲ್ಲ. ಹೀಗೆ ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಖಾರವಾಗಿ ನುಡಿದರು.

‘ಪರಿಸರ ಸೂಕ್ಷ್ಮ ಹಳ್ಳಿಗಳ ರೈತರ ಪಾರಂಪರಿಕ ಹಕ್ಕುಗಳಿಗೆ ಯಾವ ತೊಂದರೆ ಇಲ್ಲ. ಕೃಷಿ ಉದ್ಯಮ ಮತ್ತು ಆಹಾರ ಸಂಸ್ಕರಣೆ ಉದ್ಯಮಗಳಿಗೆ ಉತ್ತಮ ಅವಕಾಶವಿದೆ’ ಎಂದರು.

‘ಸ್ಮಾರ್ಟ್‌ ವಿಲೇಜ್’ ಮಾಡಿ: ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ ಅವರು ಮಾತ­ನಾಡಿ, ‘ದೇಶದಲ್ಲಿ ಶೇ 70 ರಷ್ಟು ಗ್ರಾಮಗಳಿವೆ. ಹಳ್ಳಿಗಳಿಂದ ನಗರಕ್ಕೆ ಆಗುತ್ತಿರುವ ಸಾಮೂಹಿಕ ವಲಸೆಗೆ ಹಳ್ಳಿಗಳಲ್ಲಿ ಕಂಡು ಬರುತ್ತಿರುವ ನೀರಿನ ಅಭಾವವು ಪ್ರಮುಖ ಕಾರಣವಾಗಿದೆ. ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ­ಯಿಂದ ಮಾಲಿನ್ಯ ಮತ್ತು ಆಹಾರದ ಅಭಾವ ಇನ್ನಿತರ ಸಮಸ್ಯೆಗಳು ಎದುರಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಸಮಸ್ಯೆಗೆ ಮುಕ್ತಿ ಹಾಡಲು ಸ್ಮಾರ್ಟ್ ಸಿಟಿಯಂತೆ ‘ಸ್ಮಾರ್ಟ್ ವಿಲೇಜ್’ ಕಲ್ಪನೆಯಲ್ಲಿ ಹಳ್ಳಿಗಳಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆ, ಉದ್ಯೋಗ, ಆರೋಗ್ಯ, ರಕ್ಷಣೆ, ಸಾರಿಗೆ ವ್ಯವಸ್ಥೆ ಮತ್ತು ಲಭ್ಯವಿರುವ ಪ್ರಾಕೃತಿಕ ಹಾಗೂ ಕೃಷಿ ಆಧಾರಿತ ಸಂಪನ್ಮೂಲಗಳ ಸುಸ್ಥಿರ ಬಳಕೆಯ ದೃಷ್ಟಿಯಿಂದ ‘ಸ್ಮಾರ್ಟ್ ವಿಲೇಜ್’ ಯೋಜನೆಯ ನಕ್ಷೆಯನ್ನು ರೂಪಿಸಲಾಗಿದೆ.  ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ನಗರಗಳ ಮೇಲಿನ ಒತ್ತಡ ಹಾಗೂ ವಲಸೆ ಪ್ರಮಾಣವನ್ನು  ತಗ್ಗಿಸಬಹುದು’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿ­ಯಾನದ ವ್ಯಾಪ್ತಿಯಲ್ಲಿ ಕೆರೆ ಸ್ವಚ್ಛತೆಗೆ ವಿಶೇಷ ಆದ್ಯತೆ  ನೀಡಬೇಕು. ಕೆರೆ ಉತ್ಸವ ಮತ್ತು ಕೆರೆ ಹಬ್ಬ ಮುಂತಾದ ವ್ಯಾಪಕ ರಚನಾತ್ಮಕ ಜನಾಂದೋಲನ­ಗಳನ್ನು ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.