ADVERTISEMENT

ಅಮೂಲ್‌ ಜತೆ ಪೈಪೋಟಿ ಅಧಿಕಾರಿಗಳಿಗೆ ಸಿಎಂ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಬೆಂಗಳೂರು: ‘ಗುಜರಾತಿನ ಅಮೂಲ್  ಉತ್ಪನ್ನದ ಜೊತೆ ನಂದಿನಿ ಹಾಲಿನ ಉತ್ಪನ್ನಗಳು ಪೈಪೋಟಿ ನೀಡಬೇಕು. ಅಮೂಲ್‌ಗಿಂತ  ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಉತ್ಪಾದನೆ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟ ನಗರದಲ್ಲಿ ಗುರುವಾರ ಆಯೋಜಿಸಿದ್ದ ಹೊಸಕೋಟೆ ಡೇರಿ ಮತ್ತು ಉತ್ಪನ್ನ ಘಟಕದ ಉದ್ಘಾಟನೆ ಹಾಗೂ ಉಗ್ರಾಣ, ಮಾರುಕಟ್ಟೆ ಕಚೇರಿ, ಉಪಹಾರ ಗೃಹ ಮತ್ತು ಸಭಾಂಗಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘64 ಬಗೆ ಉತ್ಪನ್ನಗಳನ್ನು   ನಂದಿನಿ ಹಾಲಿನಿಂದ ತಯಾರು ಮಾಡಲಾಗುತ್ತಿದೆ. ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಬೇಕು. ದೇಶದ ಎಲ್ಲ ಕಡೆ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುವ ಹಾಗೆ ಗುಣಮಟ್ಟ ಇರಬೇಕು’ ಎಂದರು.

‘ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ  ಕಾರ್ಯದರ್ಶಿಗಳು, ಸಹಾಯಕರು, ಟೆಸ್ಟರ್‌ಗಳಿಗೆ ಪ್ರತಿ ಲೀಟರ್‌ಗೆ 20 ಪೈಸೆ ಸಹಾಯ ಧನ ನೀಡಲಾಗುತ್ತಿದೆ. ಅದರಲ್ಲಿ ಅರ್ಧದಷ್ಟು ಹಣವನ್ನು ಸಿಬ್ಬಂದಿಗೆ ಹಣ ನೀಡಿದ್ದು,  ಉಳಿದ ಅರ್ಧದಷ್ಟು ಬಾಕಿ ಹಣವನ್ನು ಶೀಘ್ರ ನೀಡಲಾಗುವುದು’ ಎಂದು ತಿಳಿಸಿದರು.

ಪಶುಸಂಗೋಪನಾ ಸಚಿವ ಎ. ಮಂಜು ಮಾತನಾಡಿ, ‘ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುತ್ತಿರುವ ಕಲಬೆರಕೆ ಹಾಲನ್ನು ನಿಯಂತ್ರಣ ಮಾಡುವ ವ್ಯವಸ್ಥೆ ಆಗಬೇಕು. ಕೆಎಂಎಫ್ ಮಳಿಗೆಗಳು ಕೆಲವರ ಹಿಡಿತದಲ್ಲಿವೆ. ಅವುಗಳು ಸಾರ್ವಜನಿಕರಿಗೂ ಸಿಗುವಂತಾಗಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.