ADVERTISEMENT

ಅಲಯನ್ಸ್‌ ವಿವಿ ಕುಲಪತಿಯ ಇಬ್ಬರು ಪತ್ನಿಯರ ವಿಚಾರಣೆ

ಅಕ್ಕನ ಮಗಳ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:50 IST
Last Updated 10 ಫೆಬ್ರುವರಿ 2016, 19:50 IST

ಬೆಂಗಳೂರು: ಅಕ್ಕನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಂಧಿತರಾಗಿರುವ ‘ಅಲಯನ್ಸ್‌’ ವಿಶ್ವವಿದ್ಯಾಲಯದ ಕುಲಪತಿ ಮಧುಕುರ್ ಬಿ. ಅಂಗುರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ಈಗ ಅವರ ಇಬ್ಬರು ಪತ್ನಿಯರನ್ನು ವಿಚಾರಣೆ ನಡೆಸುತ್ತಿದ್ದಾರೆ.

‘ಆಸ್ತಿ ವಿವಾದ ಸಂಬಂಧ ಮಧುಕರ್ ವಿರುದ್ಧ ಈ ರೀತಿ ಸುಳ್ಳು ದೂರು ದಾಖಲಿಸಲಾಗಿದೆ ಎಂಬ ಬಗ್ಗೆ ಅವರ ಇಬ್ಬರು ಪತ್ನಿಯರು ಆರೋಪ ಮಾಡಿದ್ದಾರೆ. ಹೀಗಾಗಿ ಅವರನ್ನೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಗೇಶ್ ಬಂಧನ: ‘ಅತ್ಯಾಚಾರದ ವಿಷಯ ಬಹಿರಂಗಪಡಿಸದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮಧುಕರ್ ಅವರ ಸಹಚರ ಯೋಗೇಶ್‌ನನ್ನು ಮಂಗಳವಾರ (ಫೆ.9) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

‘ಮಧುಕರ್ ಅವರನ್ನು ಈಗಾಗಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಅವರ ಪತ್ನಿಯರು ಹಾಗೂ ಸಂತ್ರಸ್ತೆಯ ಕುಟುಂಬ ಸದಸ್ಯರ ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಕರಣಕ್ಕೆ ಸ್ಪಷ್ಟ ಚಿತ್ರಣ ಸಿಗುತ್ತದೆ. ಆ ನಂತರ ಮಧುಕರ್ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಅಕ್ಕನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮಡಿವಾಳ ಪೊಲೀಸರು ಫೆ.6ರಂದು ಮಧುಕರ್ ಅವರನ್ನು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.