ADVERTISEMENT

ಅಸಂಘಟಿತ ಕಾರ್ಮಿಕರ ವಲಸೆ ಸಮಸ್ಯೆ: ಸರ್ಕಾರ ಕ್ರಮ ಕೈಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:42 IST
Last Updated 28 ಜುಲೈ 2015, 19:42 IST

ಬೆಂಗಳೂರು: ‘ಕಾರ್ಮಿಕ ವಲಸೆಯಲ್ಲಿ ತಳಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿ ಮತ್ತು  ಪಂಗಡದವರೇ ಹೆಚ್ಚಾಗಿದ್ದು, ಸರ್ಕಾರ ಅಂತಹವರ ಸಮಸ್ಯೆ ಬಗೆಹರಿಸಿದರೆ ವಲಸೆ ಸಮಸ್ಯೆಗೆ ನಿಜವಾದ ಪರಿಹಾರ ಸಿಗುತ್ತದೆ’ ಎಂದು ಭಾರತೀಯ ಸಾಮಾಜಿಕ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಸುಖದೇವ್ ಥೋರಟ್ ಹೇಳಿದರು.

ನಗರದ ಭಾರತೀಯ ಸಾಮಾಜಿಕ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ‘ವಲಸೆ ಮತ್ತು ಕಾರ್ಮಿಕ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಅಸಂಘಟಿತ ಕಾರ್ಮಿಕರ ವಲಸೆ ಅತಿದೊಡ್ಡ ಸಮಸ್ಯೆ. ಇದನ್ನು ತಡೆಯಲು ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿ ಕೆಲಸಗಳಿಗೆ ವ್ಯಾಪಕ ಉತ್ತೇಜನ ನೀಡಬೇಕು’ ಎಂದು ಸಲಹೆ ನೀಡಿದರು.

‘ಭಾರತದಲ್ಲಿ ಹಳ್ಳಿಯಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ, ನಗರದಿಂದ ನಗರಕ್ಕೆ ಮತ್ತು ನಗರದಿಂದ ಹಳ್ಳಿಗೆ ವಲಸೆ ಎಂಬ ನಾಲ್ಕು ಪ್ರಕಾರದ ಕಾರ್ಮಿಕ ವಲಸೆ ಗುರುತಿಸಬಹುದು’ ಎಂದು ಅವರು ತಿಳಿಸಿದರು.

‘ಹಳ್ಳಿಯಿಂದ ಮತ್ತೊಂದು ಹಳ್ಳಿಗೆ  ವಲಸೆ ಹೋಗುವರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರೇ ಹೆಚ್ಚಾಗಿ ಕಂಡು ಬರುತ್ತಾರೆ. ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುವವರಲ್ಲಿ ಮಧ್ಯಮ ವರ್ಗದ ಕಾರ್ಮಿಕರ ಸಂಖ್ಯೆ ಜಾಸ್ತಿ’ ಎಂದರು.

‘ನಗರದಿಂದ ಹಳ್ಳಿಗೆ ವಲಸೆ ಹೋಗುವುದು ತೀರಾ ವಿರಳ. ಇನ್ನು ನಗರದಿಂದ ನಗರಕ್ಕೆ ವಲಸೆ ಹೋಗುವುವರಲ್ಲಿ ಉನ್ನತ ವರ್ಗದ ಜನ ಹೆಚ್ಚಾಗಿ ಕಂಡುಬರುತ್ತಾರೆ. ಆದರೆ, ವಿದೇಶಗಳಿಗೆ ಉನ್ನತ ವರ್ಗದವರು ತೆರಳುವುದಕ್ಕೆ ವಲಸೆ ಅನ್ನಬಾರದು’ ಎಂದು ತಿಳಿಸಿದರು

‘ಶಿಕ್ಷಣ ಕ್ಷೇತ್ರದ ಖಾಸಗೀಕರಣಕ್ಕೆ ಕರ್ನಾಟಕ  ದೇಶದಲ್ಲೇ ಮೊದಲನೆ ಸ್ಥಾನದಲ್ಲಿದೆ. ಹಾಗಾಗಿ ತಳಸಮುದಾಯದವರಿಗೆ ಕೌಶಲಾಧರಿತ ಶಿಕ್ಷಣ ಸಿಗುತ್ತಿಲ್ಲ. ಇದರಿಂದ ಅಸಂಘಟಿತ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಮಿಕ ಮತ್ತು ವಲಸೆ ಕೇಂದ್ರದ ಸಂಯೋಜಕ ಮಾರ್ಟಿನ್ ಪುಥುಸೆರ್ರಿ ಮಾತನಾಡಿ, ‘ವಲಸೆ ಬರುವ ಅಸಂಘಟಿತ ಕಾರ್ಮಿಕರಿಗೆ ಉದ್ಯೋಗದಾತರಿಂದ ಯಾವುದೇ ಮೂಲಸೌಕರ್ಯಗಳು ಸರಿಯಾಗಿ ಸಿಗುವುದಿಲ್ಲ. ಕೆಲವು ಕಡೆ ಅಸಂಘಟಿತ ಕಾರ್ಮಿಕರ ಮಾನವ ಕಳ್ಳಸಾಗಣೆ ಸಹ ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.