ADVERTISEMENT

‘ಆದಿವಾಸಿಗಳಿಗೆ ಸವಲತ್ತು ವಿತರಣೆ’

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 20:00 IST
Last Updated 21 ಜನವರಿ 2017, 20:00 IST
‘ಆದಿವಾಸಿಗಳಿಗೆ ಸವಲತ್ತು ವಿತರಣೆ’
‘ಆದಿವಾಸಿಗಳಿಗೆ ಸವಲತ್ತು ವಿತರಣೆ’   

ಬೆಂಗಳೂರು: ರಾಜ್ಯದಲ್ಲಿರುವ ಮೂಲ ಆದಿವಾಸಿ ಸಮುದಾಯಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುವ ಸಮಾರಂಭ ಫೆ. 1ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವರು, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಆದಿವಾಸಿಗಳಿಗೆ ಅಂದು ಹಕ್ಕುಪತ್ರ, ಸಾಲ ಸೌಲಭ್ಯ, ಹೊಲಿಗೆ ಯಂತ್ರ, ಚಾಲನಾ ಪರವಾನಗಿ ಮುಂತಾದ ಸವಲತ್ತುಗಳನ್ನು ವಿತರಿಸಲಾಗುವುದು ಎಂದರು.

‘ಬುಡಕಟ್ಟು ಜನರ ಮನೆಬಾಗಿಲಿಗೆ ತೆರಳಿ ಸೌಲಭ್ಯ ನೀಡಲು ಸರ್ಕಾರ ಬದ್ಧವಾಗಿದೆ. ಈ ಹಿಂದೆ ಹಾಡಿಗಳಲ್ಲಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ನೀಡಿದ ಭರವಸೆಗಳು ಈಡೇರಿವೆಯೇ ಎಂದು ಪರಿಶೀಲಿಸಲು ಮತ್ತೊಮ್ಮೆ ಅದೇ ಹಾಡಿಗಳಿಗೆ ಭೇಟಿ ನೀಡುತ್ತೇನೆ’ ಎಂದೂ ಸಚಿವರು ಹೇಳಿದರು.

ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅರಣ್ಯ ಮತ್ತು ಅರಣ್ಯ ಅಂಚಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯ ಜನರಿಗೆ ಮಳೆಗಾಲದ ಆರು ತಿಂಗಳ ಅವಧಿಯಲ್ಲಿ ಪೌಷ್ಟಿಕ ಆಹಾರ ವಿತರಿಸುವ ಕಾರ್ಯ ಕ್ರಮ ಜಾರಿಯಲ್ಲಿದೆ. ಕಾಡುಕುರುಬ, ಸೋಲಿಗ, ಎರವ, ಕೊರಗ, ಮಲೆ ಕುಡಿಯ, ಸಿದ್ಧಿ ಬುಡಕಟ್ಟು ಸಮುದಾಯಕ್ಕೆ ಸೇರಿದ 41,653 ಕುಟುಂಬ ಗಳು ಯೋಜನೆಯ ಫಲಾನುಭವಿಗ ಳಾಗಿದ್ದು, ಇದಕ್ಕೆ ₹ 55.25 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಈ ಯೋಜನೆಯನ್ನು ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಗೌಡಲು ಮತ್ತು ಹಸಲರು ಜನಾಂಗಕ್ಕೆ ಸೇರಿದ 5 ಸಾವಿರ ಕುಟುಂಬಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ನಿರ್ಧಾರಕ್ಕೆ ಒಳ ಮೀಸಲಾತಿ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಕುರಿತು ಸಿದ್ದರಾಮಯ್ಯ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳು ತ್ತಾರೆ ಎಂದು ಸಚಿವ ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.

‘ಶೋಷಿತ ವರ್ಗದ ಜನರ ನೋವು ಮುಖ್ಯಮಂತ್ರಿಗೆ ಗೊತ್ತಿದೆ. ಜಾತಿಗಣತಿ ವರದಿ ಬಿಡುಗಡೆಯಾದ ನಂತರ ಒಳಮೀಸಲಾತಿ ಕುರಿತು ಅವರು ತೀರ್ಮಾನ ಕೈಗೊಳ್ಳುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.