ADVERTISEMENT

ಆನ್‌ಲೈನ್‌ ಸೇವೆ ತಾತ್ಕಾಲಿಕ ಸ್ಥಗಿತ

ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:44 IST
Last Updated 20 ನವೆಂಬರ್ 2017, 19:44 IST
ಆನ್‌ಲೈನ್‌ ಸೇವೆ ತಾತ್ಕಾಲಿಕ ಸ್ಥಗಿತ
ಆನ್‌ಲೈನ್‌ ಸೇವೆ ತಾತ್ಕಾಲಿಕ ಸ್ಥಗಿತ   

ಬೆಂಗಳೂರು: ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಶೇಖರಿಸಿಟ್ಟಿದ್ದ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಅದರಿಂದಾಗಿ ಇಲಾಖೆಯ ಆನ್‌ಲೈನ್‌ ಸೇವೆಗಳೆಲ್ಲ ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಇಲಾಖೆಯ ಜಾಲತಾಣ ’www.transport.karnataka.gov.in’ ಮೂಲಕ ಲಭ್ಯವಾಗುತ್ತಿದ್ದ ಕಲಿಕಾ, ಚಾಲನಾ ಪ್ರಮಾಣಪತ್ರ ಮತ್ತು ಹೊಸ ವಾಹನಗಳ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಹಾಗೂ ಇ–ಪಾವತಿ ಸೇವೆಗಳು ನಿಷ್ಕ್ರಿಯಗೊಂಡಿವೆ. ಇದರಿಂದ ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳ ಕೆಲಸಕ್ಕೆ ಅಡ್ಡಿಯಾಗಿದೆ.

‘ಆನ್‌ಲೈನ್‌ ಸೇವೆ ಹಾಗೂ ಜಾಲತಾಣದ ನಿರ್ವಹಣೆಯನ್ನು ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ವಹಿಸಿಕೊಂಡಿದೆ. ಈಗ ಸರ್ವರ್‌ನಲ್ಲಿ ಕಾಣಿಸಿಕೊಂಡಿರುವ ತೊಂದರೆಯನ್ನು ಆ ಸೆಂಟರ್‌ನ ಸಿಬ್ಬಂದಿಯೇ ಸರಿಪಡಿಸುತ್ತಿದ್ದಾರೆ. ಸೇವೆಗಳು ಮರು ಆರಂಭವಾಗಲು ಎಷ್ಟು ದಿನಗಳು ಬೇಕು ಎಂಬುದನ್ನು ಅವರು ಹೇಳುತ್ತಿಲ್ಲ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸದ್ಯದ ಸರ್ವರ್‌ ದುರಸ್ತಿಯಲ್ಲಿದ್ದು, ಹೊಸ ಸರ್ವರ್ ಅಗತ್ಯವಿದೆ ಎಂದು ಎನ್‌ಐಸಿ ಸಿಬ್ಬಂದಿ ಹೇಳುತ್ತಿದ್ದಾರೆ. ಬೇಗನೇ ದುರಸ್ತಿ ಕೆಲಸ ಮುಗಿಸುವಂತೆ ಹೇಳಿದ್ದೇವೆ’ ಎಂದು ವಿವರಿಸಿದರು.

‘ಸಾರಥಿ’ ಬಂದ್‌: ಆನ್‌ಲೈನ್‌ ಸೇವೆಗಳನ್ನು ಒದಗಿಸಲೆಂದು ಸಾರಿಗೆ ಇಲಾಖೆಯು ಸಾರಥಿ 3 (ರಾಜ್ಯ) ಹಾಗೂ ಸಾರಥಿ 4 (ಬೆಂಗಳೂರಿನ ಆಯ್ದ ಆರ್‌.ಟಿ.ಒ ಕಚೇರಿಯಲ್ಲಿ ಮಾತ್ರ) ತಂತ್ರಾಂಶವನ್ನು ಪರಿಚಯಿಸಿದೆ. ಈಗ ಆ ತಂತ್ರಾಂಶದ ಕೆಲಸವೂ ಬಂದ್‌ ಆಗಿದೆ.

‘ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಿತ್ತು. ಅದಕ್ಕೆ ಕಡಿವಾಣ ಹಾಕಲು ಆನ್‌ಲೈನ್‌ ಸೇವೆಗಳನ್ನು ಪರಿಚಯಿಸಲಾಗಿದೆ. ವಿವಿಧ ಪ್ರಮಾಣಪತ್ರಕ್ಕಾಗಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿದ್ದೇವೆ. ಆರಂಭದಲ್ಲಿ ಸೇವೆಯೂ ಚೆನ್ನಾಗಿತ್ತು. ಆದರೆ, ಸರ್ವರ್‌ನಲ್ಲಿ ಉಂಟಾದ ತೊಂದರೆಯಿಂದ ಸಾರ್ವಜನಿಕರಿಗೆ ಆನ್‌ಲೈನ್‌ ಸೇವೆ ಲಭ್ಯವಾಗುತ್ತಿಲ್ಲ. ತ್ವರಿತವಾಗಿ ಸೇವೆಗಳನ್ನು ಮರು ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಇಲಾಖೆಯ ಪರಿಸರ ಮತ್ತು ಇ–ಆಡಳಿತ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ದತ್ತಾಂಶ ಅಳಿಯುವ ಆತಂಕ: ‘ಸರ್ವರ್‌ನಲ್ಲಿ ಉಂಟಾದ ತಾಂತ್ರಿಕ ತೊಂದರೆಗೆ ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಇದುವರೆಗೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಸಾರ್ವಜನಿಕರ ಮಾಹಿತಿಯೆಲ್ಲ ಅಳಿಯುವ ಆತಂಕವಿದ್ದು, ಆ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಆಗದು’ ಎಂದು ಅಧಿಕಾರಿ ತಿಳಿಸಿದರು.

ಮುಖ್ಯಾಂಶಗಳು

* ಅರ್ಜಿ ಸಲ್ಲಿಕೆ, ಇ–ಪಾವತಿ ಸೇವೆಗಳು ನಿಷ್ಕ್ರಿಯ

* ಈವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದವರ ಮಾಹಿತಿ ಅಳಿಸುವ ಆತಂಕ

* ಸೇವೆಗಳ ಮರು ಆರಂಭಕ್ಕೆ ಎಷ್ಟು ಸಮಯ ಬೇಕು ಎಂಬುದು ತಿಳಿದುಬಂದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.