ADVERTISEMENT

ಆನ್‌ಲೈನ್‌ ವ್ಯಾಪಾರದ ಅಕ್ರಮಕ್ಕೆ ಲಗಾಮು ಹಾಕಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 20:36 IST
Last Updated 24 ಜೂನ್ 2016, 20:36 IST
ಆನ್‌ಲೈನ್‌ ವ್ಯಾಪಾರದ ಅಕ್ರಮಕ್ಕೆ ಲಗಾಮು ಹಾಕಿ
ಆನ್‌ಲೈನ್‌ ವ್ಯಾಪಾರದ ಅಕ್ರಮಕ್ಕೆ ಲಗಾಮು ಹಾಕಿ   

ಬೆಂಗಳೂರು:  ‘ಆನ್‌ಲೈನ್‌ ಖರೀದಿಗೆ ರಶೀದಿ ಸಿಕ್ಕರೂ, ಅದನ್ನು ದೃಢೀಕರಿಸುವ ಸಹಿ ಇರುವುದಿಲ್ಲ. ಅಹವಾಲು ಸಲ್ಲಿಸುವ ವಿಳಾಸದ ವಿವರಗಳನ್ನು ಕೆಲವು ಕಂಪೆನಿಗಳು ನೀಡುವುದೇ ಇಲ್ಲ. ಹಾಗಾಗಿ  ವಂಚನೆಗೊಳಗಾದ ಗ್ರಾಹಕರು  ಕಾನೂನು ಹೋರಾಟ ನಡೆಸುವುದಕ್ಕೂ ಸಾಧ್ಯವಾಗದ ಅಸಹಾಯಕ ಸ್ಥಿತಿ ಇದೆ’ ‘ಗ್ರಾಹಕ ಶಕ್ತಿ’ ಬಳಕೆದಾರರ ಸಂಘಟನೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಕೆ. ಸೋಮಶೇಖರ್‌ ಅವರು ಆನ್‌ಲೈನ್‌  ಮೂಲಕ ನಡೆಯುವ ವ್ಯಾಪಾರದ ಲೋಪಗಳ ಬಗ್ಗೆ  ಗಮನ ಸೆಳೆದರು.

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ಅರ್ಥವ್ಯವಸ್ಥೆಗೆ ಮಾರಕವಾಗಿರುವ ಕಳ್ಳಸಾಗಣೆ ಮತ್ತು ನಕಲಿ ಉತ್ಪಾದನಾ ಚಟುವಟಿಕೆ ತಡೆ ಸಮಿತಿ (ಕ್ಯಾಸ್ಕೇಡ್‌)  ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಕ್ರಮ ವ್ಯಾಪಾರ  ಹಾಗೂ ಕಳ್ಳಸಾಗಣೆ ತಡೆ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಆನ್‌ಲೈನ್‌ ಮೂಲಕ ಕೆಲವು ಸರಕುಗಳನ್ನು ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅವರು   ಈ ನೆಲದ ತೆರಿಗೆ ಪದ್ಧತಿಯನ್ನೂ ಪಾಲಿಸುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ಆದಾಯವೂ ಸೋರಿಕೆಯಾಗುತ್ತಿದೆ. ಆನ್‌ಲೈನ್‌ ವ್ಯಾಪಾರದ ಹೆಸರಿನಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ’ ಎಂದರು.

ಕ್ಯಾಸ್ಕೇಡ್‌  ಸಲಹೆಗಾರ ದೀಪಚಂದ್‌ ಮಾತನಾಡಿ, ‘ಏಳು ಪ್ರಮುಖ ತಯಾರಿಕಾ ವಲಯಗಳಲ್ಲಿನ  ಕಳ್ಳಸಾಗಣೆ ಹಾಗೂ ನಕಲಿ ಉತ್ಪನ್ನಗಳ ಮಾರಾಟದಿಂದ ಕೇಂದ್ರ ಸರ್ಕಾರ ಅನುಭವಿಸುವ ನಷ್ಟದ ಬಗ್ಗೆ ಕ್ಯಾಸ್ಕೇಡ್‌ ಅಧ್ಯಯನ ನಡೆಸಿದೆ. ಇದರ ಪ್ರಕಾರ ಸರ್ಕಾರವು ಪ್ರತಿ ವರ್ಷ ಶೇ 44.4ರಷ್ಟು ಆದಾಯವನ್ನು ಕಳೆದುಕೊಳ್ಳುತ್ತಿದೆ’ ಎಂದರು.

‘ಬೌದ್ಧಿಕ ಆಸ್ತಿ ಹಕ್ಕಿಗೆ ರಕ್ಷಣೆ ಇಲ್ಲದಿದ್ದರೆ, ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪೆನಿಗಳು ಮುಂದೆ ಬರುವುದಿಲ್ಲ. ನಕಲಿ ಹಾವಳಿ ಹೆಚ್ಚಾದರೆ ಕಂಪೆನಿಯ ಜನಪ್ರಿಯತೆಗೂ ಕುತ್ತು ಉಂಟಾಗುತ್ತದೆ. ಕಟ್ಟಕಡೆಯಲ್ಲಿ ಇದು ದೇಶದ ಪ್ರಗತಿಗೆ ಹೊಡೆತ ನೀಡುತ್ತದೆ’ ಎಂದು ವಿಶ್ಲೇಷಿಸಿದರು.

ನಕಲಿ ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳನ್ನು ವಿವರಿಸಿದ ಅವರು, ‘ಗ್ರಾಹಕರು ವಾಹನದ ಬಿಡಿಭಾಗ ಖರೀದಿಸುವಾಗ  ಗುಣಮಟ್ಟದ ಬದಲು ಬೆಲೆಗೆ ಮಹತ್ವ ನೀಡುತ್ತಾರೆ. ದೇಶದಲ್ಲಿ ಸಂಭವಿಸುವುದ ಶೇ 20ರಷ್ಟು ರಸ್ತೆ ಅಪಘಾತಗಳಿಗೆ ವಾಹನಗಳಲ್ಲಿನ ನಕಲಿ ಬಿಡಿಭಾಗಗಳೇ ಕಾರಣ. ರಸ್ತೆ ಅಪಘಾತದಿಂದ ಸಾವು ಸಂಭವಿಸಿರುವ ಪ್ರಕರಣಗಳ ಪೈಕಿ ಶೇ 50 ರಷ್ಟು ಪ್ರಕರಣಗಳಿಗೆ ನಕಲಿ ಬಿಡಿಭಾಗಗಳ ಬಳಕೆ ಕಾರಣ’ ಎಂದರು.

ಅಕ್ರಮ ಹಣ ಉಗ್ರಗಾಮಿ ಸಂಘಟನೆಗೆ: ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ  ಓಂ ಪ್ರಕಾಶ್‌ ತನಾಡಿ,‘ಕಳ್ಳಸಾಗಣೆ ಹಿಂದೆ ಸಂಘಟಿತ ಅಪರಾಧದಲ್ಲಿ ತೊಡಗಿರುವ ಸಿಂಡಿಕೇಟ್‌ಗಳ ಕೈವಾಡ ಇದೆ.  ಇದರ ಮೂಲಕ ಸಂಗ್ರಹವಾಗುವ ಮೊತ್ತ ಭಯೋತ್ಪಾದನಾ ಚಟುವಟಿಕೆಗೂ ಬಳಕೆ ಆಗುತ್ತಿದೆ’ ಎಂದರು.

‘ಕಳ್ಳಸಾಗಣೆ ಹಾಗೂ ಅಕ್ರಮ ವ್ಯಾಪಾರಕ್ಕೆ ದಂಡ ಹಾಗೂ ಶಿಕ್ಷೆಯ ಪ್ರಮಾಣವೂ ಹೆಚ್ಚಾಗಬೇಕು’ ಎಂದು  ವಕೀಲೆ ರಮಾ ಅಯ್ಯರ್‌ ಅಭಿಪ್ರಾಯಪಟ್ಟರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.