ADVERTISEMENT

ಆಮೆಗತಿಯಲ್ಲಿ ಭೂಸ್ವಾಧೀನ- ಕಾಮಗಾರಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 55 ಆಸ್ತಿ ವಶಕ್ಕೆ ಪಡೆಯುವ ಪ್ರಕ್ರಿಯೆ ವಿಳಂಬ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಆಮೆಗತಿಯಲ್ಲಿ ಭೂಸ್ವಾಧೀನ- ಕಾಮಗಾರಿ
ಆಮೆಗತಿಯಲ್ಲಿ ಭೂಸ್ವಾಧೀನ- ಕಾಮಗಾರಿ   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲಿ ಕೈಗೊಂಡಿರುವ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗಿನ ಮಾರ್ಗದ ಕಾಮಗಾರಿಗೆ ಅಗತ್ಯ ವಿರುವ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಭೂಸ್ವಾಧೀನ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಈ ಕಾಮಗಾರಿ ಆರಂಭಗೊಳ್ಳುವುದು ವಿಳಂಬವಾಗುತ್ತಿದೆ. ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಈ ಕಾಮಗಾರಿ ಸಲುವಾಗಿ ಒಟ್ಟು 275 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದೆ. 134 ಆಸ್ತಿ ಮಾಲೀಕರಿಗೆ ಪರಿ
ಹಾರ ಪಾವತಿಸಲು ಬೇಕಾಗುವಷ್ಟು ಮೊತ್ತವನ್ನು ಮಾತ್ರ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಇದುವರೆಗೆ ಸಂದಾಯ ಮಾಡಿದೆ.

ಈ ಕಾಮಗಾರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ 55 ಆಸ್ತಿಗಳನ್ನೂ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ಈ ಪ್ರಕ್ರಿಯೆಗೆ ಹೆಚ್ಚು ಸಮಯ ತಗಲುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ. 

‘ಮಹದೇವಪುರದಿಂದ ವೈಟ್‌ಫೀಲ್ಡ್‌ವರೆಗೆ (ಶ್ರೀಸತ್ಯಸಾಯಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಾರ್ಗವಾಗಿ) ಭೂಸ್ವಾಧೀನ  ಪ್ರಕ್ರಿಯೆಗೆ ಒಳಪಡುವ  ಆಸ್ತಿಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಆದ್ದರಿಂದ ವೈಟ್‌ಫೀಲ್ಡ್‌ ಕಡೆಯಿಂದ ರಸ್ತೆ ವಿಸ್ತರಣೆ ಹಾಗೂ ಇತರ ಸಿವಿಲ್‌ ಕಾಮಗಾರಿಗಳು ಶೀಘ್ರದಲ್ಲೇ  ಆರಂಭವಾಗಲಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಬೈಯಪ್ಪನಹಳ್ಳಿಯಿಂದ ಮಹದೇವಪುರದವರೆಗಿನ 12 ಕಿ.ಮೀ. ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ  ಪೂರ್ಣಗೊಳ್ಳಲು ಇನ್ನು ಮೂರು ತಿಂಗಳು ತಗುಲಬಹುದು. ಇಲ್ಲೂ ಆಸ್ತಿಗಳ ಮೌಲ್ಯಮಾಪನ ಪೂರ್ಣಗೊಂಡಿದೆ’  ಎಂದರು.

‘15.50 ಕಿ.ಮೀ. ಉದ್ದದ ಈ ಮಾರ್ಗದ ಕಾಮಗಾರಿಗೆ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ. ಇದರ ಗುತ್ತಿಗೆ
ಯನ್ನು ಬಿ.ಆರ್‌.ಚಾವ್ಲಾ ಸಂಸ್ಥೆ ವಹಿಸಲಾಗಿದೆ. ಆಸ್ತಿಗಳ ಸ್ವಾಧೀನ ಪೂರ್ಣಗೊಳ್ಳದಿರುವುದರಿಂದ ಈ ಕೆಲಸವೂ ವಿಳಂಬವಾಗಿದೆ’ ಎಂದರು.

ಕುಂದಲಹಳ್ಳಿ  ನಿಲ್ದಾಣದಿಂದ ಸತ್ಯ ಸಾಯಿ ನಿಲ್ದಾಣದವರೆಗೆ ಸುಮಾರು 3 ಕಿ.ಮೀ. ಓವರ್‌ಹೆಡ್‌ ವಿದ್ಯುತ್‌  ಮಾರ್ಗದ  (220 ಕೆ.ವಿ) ಬದಲು ನೆಲದ ಅಡಿ ಕೇಬಲ್‌ ಅಳವಡಿಸಬೇಕಾಗಿದೆ. ಈ ಕಾಮಗಾರಿಗೆ ಬಿಎಂಆರ್‌ಸಿಎಲ್‌ ₹ 64 ಕೋಟಿಯನ್ನು ಕೆಪಿಟಿಸಿಎಲ್‌ಗೆ ಪಾವತಿಸಿದೆ.

‘ಇಡೀ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳುವ ಉದ್ದೇಶವನ್ನು ಬಿಎಂಆರ್‌ಸಿಎಲ್‌ ಹೊಂದಿದೆ. ರಸ್ತೆ ವಿಸ್ತರಣೆ ಪೂರ್ಣಗೊಂಡ ಬಳಿಕವೇ ಸಿವಿಲ್‌ ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ನಡೆಯುವಾಗ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ’ ಎಂದು ಅವರು ವಿವರಿಸಿದರು.

ರಸ್ತೆ ವಿಸ್ತರಣೆಗೆ ಒಮ್ಮೆ ಕರೆದ ಟೆಂಡರ್‌ ರದ್ದುಪಡಿಸಿ, ಮರುಟೆಂಡರ್‌ ಕರೆಯಲಾಗಿದೆ. ವೈಟ್‌ಫೀಲ್ಡ್‌ಗೆ ಮೆಟ್ರೊ ಸಂಪರ್ಕದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು ಹೆಚ್ಚಿರುವ ಈ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಆಗುವ ನಿರೀಕ್ಷೆ ಇದೆ.

275 ಮರಗಳಿಗೆ ಕೊಡಲಿ
ಈ ಮಾರ್ಗಕ್ಕಾಗಿ 275 ಮರಗಳನ್ನು ಕಡಿಯಬೇಕಾಗುತ್ತದೆ. ಮರ ಕಡಿಯುವುದಕ್ಕೆ ಅನುಮತಿ ಕೋರಿ ಬಿಬಿಎಂಪಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಬಿಎಂಆರ್‌ಸಿಎಲ್‌ ಪತ್ರ ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT