ADVERTISEMENT

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಮಂಜುನಾಥನಗರ ಮೇಲ್ಸೇತುವೆ

ಪ್ರವೀಣ ಕುಮಾರ್ ಪಿ.ವಿ.
Published 27 ಜುಲೈ 2017, 20:29 IST
Last Updated 27 ಜುಲೈ 2017, 20:29 IST
ಮಂಜುನಾಥನಗರ ಒಂದನೇ ಮುಖ್ಯ ರಸ್ತೆ ಬಳಿ ಮೇಲ್ಸೇತುವೆ ಪಿಲ್ಲರ್‌ಗಳ ಮೇಲೆ ಕಾಂಕ್ರೀಟ್‌ ಸ್ಯ್ಲಾಬ್‌  ಅಳವಡಿಸುವ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರ / ಸತೀಶ್‌ ಬಡಿಗೇರ್‌
ಮಂಜುನಾಥನಗರ ಒಂದನೇ ಮುಖ್ಯ ರಸ್ತೆ ಬಳಿ ಮೇಲ್ಸೇತುವೆ ಪಿಲ್ಲರ್‌ಗಳ ಮೇಲೆ ಕಾಂಕ್ರೀಟ್‌ ಸ್ಯ್ಲಾಬ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರ / ಸತೀಶ್‌ ಬಡಿಗೇರ್‌   

ಬೆಂಗಳೂರು: ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ತಡೆ ರಹಿತ ಸಂಚಾರ ವ್ಯವಸ್ಥೆ ರೂಪಿಸುವ ಸಲುವಾಗಿ ಮೂರು ಕಡೆ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಈ ರಸ್ತೆಯಲ್ಲಿ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಗಿದೆ.

ಈ ರಸ್ತೆಯಲ್ಲಿ ಎರಡು  ಕಡೆ  ಮೇಲ್ಸೇತುವೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ.  ಇವುಗಳ ನಡುವೆ  ಬಿಬಿಎಂಪಿ ಕೆಳಸೇತುವೆ ಕಾಮಗಾರಿಯನ್ನೂ ಇತ್ತೀಚೆಗೆ ಆರಂಭಿಸಿ, ಅರ್ಧಕ್ಕೆ ಸ್ಥಗಿತಗೊಳಿಸಿದೆ ಎಂದು ಸ್ಥಳೀಯರು ದೂರುತ್ತಾರೆ. ಈ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು  ಕಾರ್ಡ್ ರಸ್ತೆ ಆಸುಪಾಸಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಎಲ್ಲೆಲ್ಲಿ ಕಾಮಗಾರಿ: ‘ಮಂಜುನಾಥನಗರ ಒಂದನೇ ಮುಖ್ಯ ರಸ್ತೆ ಬಳಿ ₹ 18.5 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. 17 ಮೀಟರ್‌ ಅಗಲದ (ನಾಲ್ಕು ಪಥ)  271 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇದರಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಸಿಗಲಿದೆ. ಈ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಮಂಜುನಾಥನಗರ  ಹಾಗೂ ರಾಜಾಜಿನಗರ ಎರಡನೇ ಬ್ಲಾಕ್‌  ನಡುವಿನ ಸಂಪರ್ಕ ಸುಗಮವಾಗಲಿದೆ’ ಎಂದು ಬಿಬಿಎಂಪಿ ಎಂಜಿನಿಯರ್‌ ತಿಳಿಸಿದರು.

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಹಾಗೂ ಬಸವೇಶ್ವರನಗರ ಕಡೆಯ  ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ₹ 19.5 ಕೋಟಿ ವೆಚ್ಚದಲ್ಲಿ ಇನ್ನೊಂದು ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. 350 ಮೀಟರ್‌ ಉದ್ದದ ಹಾಗೂ 8.5 ಮೀ ಅಗಲದ ಈ ಮೇಲ್ಸೇತುವೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ.

‘ಕಾರ್ಡ್ ರಸ್ತೆಯಿಂದ ಬಸವೇಶ್ವರನಗರದ ಕಡೆಗೆ ಹೋಗುವ ವಾಹನಗಳು ಇಲ್ಲಿ ತಿರುವು ಪಡೆಯುತ್ತಿವೆ. ಇಲ್ಲಿ ಪದೇ ಪದೇ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಈ ಮೇಲ್ಸೇತುವೆ ಆದ ಬಳಿಕ ಬಸವೇಶ್ವರನಗರ ಕಡೆಗೆ ಹೋಗುವ ಹಾಗೂ ಆ ಕಡೆಯಿಂದ ಬರುವ ವಾಹನಗಳ ತಡೆರಹಿತ ಸಂಚಾರಕ್ಕೆ ಅವಕಾಶ ಸಿಗಲಿದೆ’ ಎಂದರು.  

ಸೆಪ್ಟೆಂಬರ್‌ ಒಳಗೆ ಪೂರ್ಣ: ‘ಎರಡೂ ಮೇಲ್ಸೇತುವೆ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿವೆ. 2017ರ ಸೆಪ್ಟೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ’ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌.

ಆದರೆ ಸ್ಥಳೀಯರು ಇದನ್ನು ಒಪ್ಪುವುದಿಲ್ಲ. ‘ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದನ್ನು ನೋಡಿದರೆ 2017ರ ಡಿಸೆಂಬರ್‌ ಒಳಗೂ  ಇದು ಪೂರ್ಣಗೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ  ಗೋವಿಂದ ಕಬಾಡಿ.

‘ಕಾರ್ಡ್‌ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು.  ಅಷ್ಟೂ ವಾಹನಗಳು ಈಗ ಸರ್ವೀಸ್‌ ರಸ್ತೆಯನ್ನು ಬಳಸುತ್ತಿವೆ. ಇಲ್ಲಿ ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ದಾಟುವುದಕ್ಕೂ ಸಮಸ್ಯೆ ಎದುರಿಸಬೇಕಾಗಿದೆ’ ಎಂದು ಅವರು ದೂರಿದರು.

‘ಕಾರ್ಡ್‌ ರಸ್ತೆಯಿಂದ ಮನೆಗೆ ತಲುಪಲು ಈಗ ಅರ್ಧ ಕಿ.ಮೀ. ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಇದೆ. ನಾವು ಎಷ್ಟು ಸಮಯ  ಇಂತಹ ಸಮಸ್ಯೆ ಎದುರಿಸಬೇಕು’ ಎಂದು  ಪ್ರಶ್ನಿಸುತ್ತಾರೆ ರಾಜಾಜಿನಗರ 20ನೇ ಮುಖ್ಯರಸ್ತೆ  ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವೆಂಕಟಕೃಷ್ಣ.

ತ್ರಿಶಂಕು ಸ್ಥಿತಿಯಲ್ಲಿ ಕೆಳಸೇತುವೆ ಕಾಮಗಾರಿ
ಕಾರ್ಡ್‌ ರಸ್ತೆಯಲ್ಲಿ ಶಿವನಗರ ಜಂಕ್ಷನ್‌ ಬಳಿ 600 ಮೀಟರ್‌ ಉದ್ದದ ಕೆಳಸೇತುವೆ ನಿರ್ಮಿಸುವ ₹ 49.5 ಕೋಟಿ ವೆಚ್ಚದ ಯೋಜನೆಗೆ  ಬಿಬಿಎಂಪಿ ಟೆಂಡರ್‌ ಕರೆದಿತ್ತು. ಈ ಕಾಮಗಾರಿಗೂ 2016ರ ಮೇ ತಿಂಗಳಲ್ಲೇ ಶಂಕುಸ್ಥಾಪನೆ ನಡೆದಿದ್ದರೂ ಎರಡು ತಿಂಗಳ ಹಿಂದಷ್ಟೇ ಕಾಮಗಾರಿ ಆರಂಭಿಸಲಾಗಿತ್ತು. ಈ ಕಾಮಗಾರಿಯನ್ನೂ ಸ್ಥಗಿತಗೊಳಿಸಲಾಗಿದೆ.

‘ಈ ಕೆಳಸೇತುವೆ ಕಾಮಗಾರಿಗೆ 40ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಹಾಗಾಗಿ ಕೆಳಸೇತುವೆ ಬದಲು ಮೇಲ್ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಬಿಬಿಎಂಪಿ  ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕೋ ಅಥವಾ ಕೆಳಸೇತುವೆ ಕಾಮಗಾರಿಯನ್ನೇ ಮುಂದುವರಿಸಬೇಕೋ ಎಂಬ ಗೊಂದಲವಿದೆ. ಹಾಗಾಗಿ ತಾಂತ್ರಿಕ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ಇಲ್ಲಿನ ಎರಡು ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈಗಾಗಲೇ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇದೇ ಸಂದರ್ಭದಲ್ಲಿ ಕೆಳಸೇತುವೆ ಕಾಮಗಾರಿಯನ್ನೂ ಆರಂಭಿಸಿದರೆ ಸಂಚಾರ ಸಮಸ್ಯೆ ಬಿಗಡಾಯಿಸುತ್ತದೆ ಎಂಬ ಕಾರಣಕ್ಕೆ ಈ ಕಾಮಗಾರಿಯನ್ನು ತಡವಾಗಿ ಆರಂಭಿಸಿದೆವು. ಹಾಗಾಗಿ ಇಲ್ಲಿ ವಾಹನ ಸಂಚಾರ ಮಾರ್ಗ ಬದಲಾಯಿಸುವುದಕ್ಕೂ ಸಂಚಾರ ಪೊಲೀಸರು  ಅನುಮತಿ ನೀಡಿರಲಿಲ್ಲ’ ಎಂದು ಅವರು ತಿಳಿಸಿದರು.
*
ಮೂರು ಕಾಮಗಾರಿಗಳನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಿದ್ದಾರೆ. ಇದು ಸರಿಯಲ್ಲ. ಹಾಗಾಗಿ ಕಾಮಗಾರಿ ವಿಳಂಬವಾಗುತ್ತಿದೆ.
ಗೋವಿಂದ ಕಬಾಡಿ,
ಸ್ಥಳೀಯ ನಿವಾಸಿ
*
ಕಾರ್ಡ್‌ ರಸ್ತೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಸೌಜನ್ಯಕ್ಕೂ ಸ್ಥಳೀಯರ ಅಭಿಪ್ರಾಯ ಪಡೆದಿಲ್ಲ. ನಮ್ಮ ಅಳಲುಗಳನ್ನೂ ಕೇಳುವವರಿಲ್ಲ.
ಜಿ.ವೆಂಕಟಕೃಷ್ಣ,
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT