ADVERTISEMENT

ಆಯೋಗವೆಂದರೆ ಹುಡುಗಾಟನಾ?

ಪ್ರಗತಿ ಪರಿಶೀಲನಾ ಸಭೆ: ಅಧ್ಯಕ್ಷರಿಂದ ಅಧಿಕಾರಿಯ ತರಾಟೆ

​ಪ್ರಜಾವಾಣಿ ವಾರ್ತೆ
Published 22 ಮೇ 2015, 20:16 IST
Last Updated 22 ಮೇ 2015, 20:16 IST

ಬೆಂಗಳೂರು: ‘ಸಫಾಯಿ ಕರ್ಮಚಾರಿಗಳ ಆಯೋಗವೆಂದರೆ ಹುಡುಗಾಟಿಕೆ ಅಂದುಕೊಂಡಿದ್ದೀರಾ? ನಾನು ಬಂದು ಅಧಿಕಾರಿಗಳಿಗೆ ಕಾಯಬೇಕಾ? ಜಂಟಿ ಆಯುಕ್ತರೆ ನಿಮಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲವೇ?’ –ಇದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಅವರು ಶುಕ್ರವಾರ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಲಕ್ಷ್ಮಿನರಸಯ್ಯ ಅವರನ್ನು ತರಾಟೆ ತೆಗೆದುಕೊಂಡ ಪರಿ.

ಮಲ್ಲೇಶ್ವರದಲ್ಲಿರುವ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ಬೆಳಿಗ್ಗೆ 11ಕ್ಕೆ ಪ್ರಗತಿ ಪರಿಶೀಲನಾ  ಸಭೆ ನಿಗದಿಯಾಗಿತ್ತು. ಆದರೆ, ಕಾರ್ಯನಿರ್ವಾಹಕ ಎಂಜಿನಿಯರ್‌ ಸೇರಿದಂತೆ ಯಾವ ಅಧಿಕಾರಿಗಳೂ ಸರಿಯಾದ ಸಮಯಕ್ಕೆ ಹಾಜರಾಗಲಿಲ್ಲ. ಹೀಗಾಗಿ ನಾರಾಯಣ  ಕೆಂಡಾಮಂಡಲವಾದರು. ಪಶ್ಚಿಮ ವಲಯದಲ್ಲಿ ಆರು ಮಂದಿ ಕಾರ್ಯನಿರ್ವಾಹಕ ಎಂಜಿನಿಯರ್‌ ಇದ್ದಾರೆ. ಅದರಲ್ಲಿ ಒಬ್ಬರು ಮಾತ್ರ ಸಭೆಗೆ ಹಾಜರಾಗಿದ್ದಾರೆ. ಸಭೆಗೆ ಬಾರದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಹಾಗೂ ತಡವಾಗಿ ಬಂದ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗುವುದು ಎಂದು ಎಚ್ಚರಿಸಿದರು.

‘2013ರ ಜಲಗಾರರ (ಮಾನ್ಯೂವಲ್‌ ಸ್ಕಾವೆಂಜರ್‌) ನೇಮಕಾತಿ ನಿಷೇಧ  ಪುನರ್ವಸತಿ ಕಾಯ್ದೆ ಅನ್ವಯ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡಬೇಕು, ಪೌರ ಕಾರ್ಮಿಕರ ಮಕ್ಕಳಿಗೆ ಶಾಲಾ ಶುಲ್ಕ ಪಾವತಿಸಬೇಕು ಮತ್ತು ಉದ್ಯೋಗ ಕೊಡಿಸಬೇಕು ಎಂಬ ನಿಯಮಗಳಿವೆ. ನಿಮ್ಮ ವಲಯದಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಿದ್ದೀರಿ ಎಂದು ಪಶ್ಚಿಮ ವಲಯದ ಕಲ್ಯಾಣಾಧಿಕಾರಿಯನ್ನು ಪ್ರಶ್ನಿಸಿದರು. ಆದರೆ, ಅಧಿಕಾರಿಯ ಬಳಿ ಸಮರ್ಪಕ ಉತ್ತರವಿರಲಿಲ್ಲ. ಇದು  ಕಾಯ್ದೆ ಉಲ್ಲಂಘನೆಯಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ಪೌರ ಕಾರ್ಮಿಕರಿಗೆ ಗುರುತಿನ ಚೀಟಿ  ಕೊಟ್ಟಿದ್ದೀರಾ ಎಂದು ಕೇಳಿದರು. ಇದಕ್ಕೆ ಅಧಿಕಾರಿಗಳು ಸಬೂಬು ಹೇಳಲು ಮುಂದಾದಾಗ ಒಂದು ತಿಂಗಳ ಒಳಗಾಗಿ ಎಲ್ಲ ಪೌರಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ಸೂಚಿಸಿದರು.

ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನ ಬಗ್ಗೆ ಮಾಹಿತಿ ಪಡೆದ ಅವರು, ದಿನಕ್ಕೆ ₨ 278 ರಂತೆ ತಿಂಗಳಿಗೆ ₨ 8,340 ವೇತನ ನೀಡಬೇಕು. ಅದರಲ್ಲಿ ಇಎಸ್‌ಐ, ಪಿಎಫ್‌ ಕಡಿತಗೊಳಿಸಿದರೆ ₨ 7,247 ವೇತನ ಕೊಡಬೇಕು. ಆದರೆ, ₨ 6,251 ವೇತನ ನೀಡಲಾಗುತ್ತಿದೆ. ಉಳಿದ ಹಣ ಎಲ್ಲಿ ಹೋಗುತ್ತಿದೆ ಎಂದು ಹರಿಹಾಯ್ದರು.

ಗುತ್ತಿಗೆದಾರರು ಪೌರಕಾರ್ಮಿಕರಿಗೆ ನಿಗದಿತವಾಗಿ ವೇತನ ನೀಡುತ್ತಿಲ್ಲ. ಪಾಲಿಕೆ ವತಿಯಿಂದ ಬಿಡುಗಡೆಯಾದ ₨ 1.51 ಕೋಟಿ ವಿಡಿಎ ಹಣವನ್ನು ಗುತ್ತಿಗೆದಾರರು ಪೌರಕಾರ್ಮಿಕರಿಗೆ ತಲುಪಿಸಿಲ್ಲ. ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು. ಕೂಡಲೇ ವಿಡಿಎ ಹಣವನ್ನು ಪೌರಕಾರ್ಮಿಕರಿಗೆ ನೀಡಬೇಕು ಎಂದರು. ಆಯೋಗದ ಕಾರ್ಯದರ್ಶಿ ಡಾ.ಎಂ.ಎಸ್‌.ಸಂಗಾಪೂರ  ಇದ್ದರು.

* ನಗರದಲ್ಲಿ 12 ಸಾವಿರ ಪೌರಕಾರ್ಮಿಕರಿದ್ದಾರೆ. ಆದರೆ, ನಕಲಿ ಗುರುತಿನ ಚೀಟಿ ಸೃಷ್ಟಿಸಿ 19 ಸಾವಿರ ಪೌರ ಕಾರ್ಮಿಕರಿಗೆ ವೇತನ ನೀಡಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ
-ನಾರಾಯಣ, ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.