ADVERTISEMENT

‘ಆಸ್ತಿ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರುಸುತ್ತೇವೆ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 20:07 IST
Last Updated 8 ಮಾರ್ಚ್ 2018, 20:07 IST

ಬೆಂಗಳೂರು: ವಿಜಯ ಮಲ್ಯ ಒಡೆತನದ ಯುನೈಟೆಡ್ ಬ್ರೇವರೀಸ್ ಹೋಲ್ಡಿಂಗ್ ಲಿಮಿಟೆಡ್ (ಯುಬಿಎಚ್‌ಎಲ್) ಕಂಪನಿಯ ಒಟ್ಟು ₹ 12,203 ಕೋಟಿ  ಮೌಲ್ಯದ ಆಸ್ತಿ ಮಾರಾಟ ಮಾಡಿ ಬ್ಯಾಂಕ್ ಸಾಲ ಮರುಪಾವತಿ ಮಾಡುವುದಾಗಿ ಯುಬಿಎಚ್ಎಲ್‌ ಹೈಕೋರ್ಟ್‌ಗೆ ತಿಳಿಸಿದೆ.

ಕಿಂಗ್‌ ಫಿಷರ್ ಏರ್‌ಲೈನ್ಸ್‌ಗೆ ಪಡೆದ ಸಾಲ ಮರುಪಾವತಿಸಲು ಯುಬಿಎಚ್‌ಎಲ್ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಏಕ ಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ವಿಭಾಗೀಯ ಪೀಠಕ್ಕೆ ಮಲ್ಯ ಪರ ವಕೀಲರು ಮಾಹಿತಿ ನೀಡಿದರು.

‘ಬಡ್ಡಿ ಸೇರಿ ಬ್ಯಾಂಕ್‌ ಸಾಲ ₹ 9,000 ಕೋಟಿ ಇದೆ. ಯುಬಿಎಚ್‌ಎಲ್‌ ಆಸ್ತಿಯ ಮಾರುಕಟ್ಟೆ ಮೌಲ್ಯ ₹ 12,203 ಕೋಟಿ ಇದೆ. ಆಸ್ತಿ ಮಾರಾಟದಿಂದ ಬರುವ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಸಿದ್ಧವಿದ್ದೇವೆ’ ಎಂದು ಹೇಳಿದರು.

ADVERTISEMENT

ಇದರಲ್ಲಿ ಕೆಲ ಭಾಗವನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಹೀಗಾಗಿ ಯುಬಿಎಚ್‌ಎಲ್ ಷೇರುಗಳ ಮೌಲ್ಯ ಕುಸಿದಿದೆ ಎಂದೂ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಷೇರು ಮೌಲ್ಯ ಕುಸಿತದ ಬಗ್ಗೆ ಇಲ್ಲಿ ಚರ್ಚೆ ಮಾಡುವುದು ಬೇಡ. ಸಾಲ ತೀರಿಸುವ ಬಗ್ಗೆ ಸೂಕ್ತ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಿ. ಅದು ಕೋರ್ಟ್‌ಗೆ ತೃಪ್ತಿ ಎನಿಸಬೇಕು’ ಎಂದು ಸೂಚಿಸಿತು. ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.