ADVERTISEMENT

ಆಸ್ಪತ್ರೆಗೆ ಬೆಂಕಿ: ರೋಗಿಗಳ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 20:10 IST
Last Updated 29 ಏಪ್ರಿಲ್ 2017, 20:10 IST
ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು (ಎಡ) ಬೆಂಕಿ ನಂದಿಸಿದ ಬಳಿಕ ಕಂಡುಬಂದ ಆಸ್ಪತ್ರೆ.
ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು (ಎಡ) ಬೆಂಕಿ ನಂದಿಸಿದ ಬಳಿಕ ಕಂಡುಬಂದ ಆಸ್ಪತ್ರೆ.   

ಬೆಂಗಳೂರು: ಪ್ಯಾಲೇಸ್‌ ಗುಟ್ಟಹಳ್ಳಿ ಬಳಿಯ ಬಿಲ್ವ ಆಸ್ಪತ್ರೆಯಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದ್ದು, ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೂರು ಮಹಡಿಯ ಆಸ್ಪತ್ರೆಯ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಪ್ರಯೋಗಾಲಯದಲ್ಲಿ ಬೆಳಿಗ್ಗೆ 6 ಗಂಟೆಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಗೆ ಕ್ರಮೇಣ ಹೆಚ್ಚಾಗಿ ಮೂರೂ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಈ ವೇಳೆ ಮೂರನೇ ಮಹಡಿಯ ವಾರ್ಡ್‌ನಲ್ಲಿ ಆರು ರೋಗಿಗಳು ಹಾಗೂ ಒಂಬತ್ತು ಸಿಬ್ಬಂದಿ ಇದ್ದರು. ದಟ್ಟ ಹೊಗೆಯಿಂದ ಮೆಟ್ಟಿಲುಗಳು ಗೋಚರಿಸುತ್ತಿರಲಿಲ್ಲ. 

ಸ್ಥಳೀಯರ ಸಹಾಯದಿಂದ ಸಿಬ್ಬಂದಿ ಮೂವರು ರೋಗಿಗಳನ್ನು ಹೊರಗೆ ತಂದು ಆಂಬುಲೆನ್ಸ್‌ ಮೂಲಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದರು.

ಗಾಜು ಒಡೆದು ರೋಗಿಗಳ ರಕ್ಷಣೆ: ಕಟ್ಟಡದಲ್ಲಿ ದಟ್ಟ ಹೊಗೆ ಇದ್ದಿದ್ದರಿಂದ ಒಳಗೆ ಹೋಗುವುದು ಕಷ್ಟವಾಗಿತ್ತು. ಅದರಲ್ಲೇ ಒಳಗೆ ಹೋದ ಅಗ್ನಿಶಾಮಕ ಸಿಬ್ಬಂದಿ, ಕಿಟಕಿಯ ಗಾಜುಗಳನ್ನು ಒಡೆದು ಹೊಗೆ ಹೊರಗೆ ಹೋಗುವಂತೆ ಮಾಡಿದರು. ಬಳಿಕ ಮೂವರು ರೋಗಿಗಳನ್ನು ಕಿಟಕಿ ಮೂಲಕ ಟೆರೆಸ್‌ಗೆ ಕರೆದುಕೊಂಡು ಹೋಗಿ ಅಲ್ಲಿಂದ ಏಣಿಯ ಸಹಾಯದಿಂದ ಕೆಳಗೆ ಇಳಿಸಿದರು.

‘ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಾಗಿತ್ತು. ಅವರಿಗೆ ಓಡಾಡಲು ಯಾವುದೇ ತೊಂದರೆ ಇರಲಿಲ್ಲ. ಬೆಂಕಿ ಕಾಣಿಸಿಕೊಂಡ ವೇಳೆಯೇ ಮೂವರು ಹೊರಗೆ ಬಂದರು, ಇನ್ನುಳಿದ ಮೂವರನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಕಾರಣ ನಿಗೂಢ: ‘ಬೆಂಕಿಗೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳು ಹಾಗೂ ವೈಯಾಲಿಕಾವಲ್‌ ಠಾಣೆಯ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ’ ಎಂದು ಡಿಸಿಪಿ ಚಂದ್ರಗುಪ್ತ ತಿಳಿಸಿದರು.

‘ಪ್ರಯೋಗಾಲಯದ ಪೀಠೋಪಕರಣ ಹಾಗೂ ಯಂತ್ರಗಳೆಲ್ಲವೂ ಸುಟ್ಟಿವೆ. ರೋಗಿಗಳು ಹಾಗೂ ಸಿಬ್ಬಂದಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲಿಸಿದ್ದಾರೆ’ ಎಂದು ಹೇಳಿದರು.

ರೋಗಿಗಳನ್ನು ರಕ್ಷಿಸಲು ಕಟ್ಟಡದ ಒಳಗೆ ಹೋಗಿದ್ದ ಹೆಡ್‌ ಕಾನ್‌ಸ್ಟೆಬಲ್‌ ಧನಂಜಯ ಉಸಿರಾಟ ತೊಂದರೆಯಿಂದ ಅಸ್ವಸ್ಥಗೊಂಡರು.

‘ಕಟ್ಟಡದಲ್ಲಿದ್ದ ದಟ್ಟ ಹೊಗೆ ಮಧ್ಯೆಯೇ ಅವರು ಒಳಗೆ ಹೋಗಿದ್ದರು. ಕರವಸ್ತ್ರವನ್ನು ಮುಖಕ್ಕೆ ಕಟ್ಟಿಕೊಂಡಿದ್ದರು. ಹೊಗೆಯಲ್ಲಿ ಉಸಿರಾಟ ಕಷ್ಟವಾಗಿ ಕುಸಿದು ಬಿದ್ದಿದ್ದರು. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.