ADVERTISEMENT

ಆಸ್ಪತ್ರೆಗೆ ಹಣ ಒಯ್ಯುತ್ತಿದ್ದ ವ್ಯಕ್ತಿ ದರೋಡೆ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಬೆಂಗಳೂರು: ಆಸ್ಪತ್ರೆಗೆ ಕಟ್ಟಲು ಹಣ ಕೊಂಡೊಯ್ಯುತ್ತಿದ್ದ ಬಟ್ಟೆ ವ್ಯಾಪಾರಿ ವರದರಾಜು ಎಂಬುವವರನ್ನು ಅಡ್ಡಗಟ್ಟಿ, ₨ 1.7 ಲಕ್ಷ ದೋಚಿದ್ದ ಐವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವಾಹನಗಳ ಚಾಲಕರಾದ ಉಮೇಶ್‌ (21), ಮಂಜುನಾಥ (22), ಕುಮಾರ್ (21), ಮುತ್ತುರಾಜ್‌ (22) ಹಾಗೂ ಮೋಹನ್ ಅಲಿಯಾಸ್ ಮೋರಿ (21) ಬಂಧಿತರು. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಚುಂಚಘಟ್ಟದ ಬೀರೇಶ್ವರನಗರ ನಿವಾಸಿಯಾದ ವರದರಾಜು ಅವರ ಪತ್ನಿ ಡೆಂಗೆ ಬಂದು ಕೋಣನಕುಂಟೆ ಸಮೀಪದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಗೆ ಹಣ ಕಟ್ಟುವುದಕ್ಕಾಗಿ ವರದರಾಜು ಅವರು, ಸೋಮವಾರ ಮನೆಯಲ್ಲಿದ್ದ ಒಡವೆಗಳನ್ನು ಗಿರವಿ ಇಟ್ಟು, ಹಣ ದೊಂದಿಗೆ ಸಂಬಂಧಿಕರಾದ ಜಯಪ್ಪ ಎಂಬುವವರ ಜತೆ ಸಂಜೆ ಆಸ್ಪತ್ರೆಗೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ವರದರಾಜು ಅವರು ಹಣ ಕೊಂಡೊಯ್ಯುತ್ತಿದ್ದನ್ನು ಗಮನಿಸಿದ್ದ ಆರೋಪಿಗಳು, ತಲಘಟ್ಟಪುರ ಸಮೀಪ ಬೈಕ್‌ಗಳಲ್ಲಿ ಬಂದು ಇಬ್ಬರನ್ನು ಅಡ್ಡಹಾಕಿ ಬೆದರಿಸಿ, ಹಣದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು.

ಘಟನೆ ಸಂಬಂಧ ವರದರಾಜು ಅವರು ಠಾಣೆಗೆ ಬಂದು ದೂರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ತಪಾಸಣೆ ವೇಳೆ ಸಿಕ್ಕಿಬಿದ್ದರು: ದೋಚಿದ್ದ ಹಣವನ್ನು ಹಂಚಿಕೊಂಡಿದ್ದ ಆರೋಪಿಗಳು, ಮದ್ಯದ ಅಂಗಡಿಯೊಂದರಲ್ಲಿ ಕಂಠಪೂರ್ತಿ ಕುಡಿದು, ಬೈಕ್‌ಗಳಲ್ಲಿ ಕೋಣನಕುಂಟೆ ಕಡೆಗೆ ರಾತ್ರಿ 12.30ರ ಸುಮಾರಿಗೆ ಹೋಗುತ್ತಿದ್ದರು.

ಇದೇ ವೇಳೆ ಸಿಬ್ಬಂದಿ ಕನಕಪುರ ಜಂಕ್ಷನ್‌ನಲ್ಲಿ ನಾಕಾಬಂದಿ ಹಾಕಿ, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆರೋಪಿಗಳ ಬೈಕ್‌ಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ಅವರ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದರು. ಆಗ ಹಣ ದರೋಡೆ ಮಾಡಿದ್ದ ವಿಷಯ ಬಾಯ್ಬಿಟ್ಟರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.