ADVERTISEMENT

ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ನಿಯಂತ್ರಣಕ್ಕೆ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2015, 19:50 IST
Last Updated 7 ಅಕ್ಟೋಬರ್ 2015, 19:50 IST

ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳನ್ನು ಸಾಮಾನ್ಯ ಟ್ಯಾಕ್ಸಿ ಸಂಸ್ಥೆಗಳ ವ್ಯಾಪ್ತಿಗೆ ತಂದು ಆದೇಶ ಹೊರಡಿಸಿದೆ. ಈ ಟ್ಯಾಕ್ಸಿಗಳನ್ನು ಸಾಮಾನ್ಯ ಟ್ಯಾಕ್ಸಿಗಳ ವ್ಯಾಪ್ತಿಗೆ ತರಲು ರಾಜ್ಯ ಸಾರಿಗೆ ಇಲಾಖೆ ಮುಂದಡಿ ಇಟ್ಟಿದೆ.

‘ಓಲಾ, ಉಬರ್‌ ಮತ್ತಿತರ ಟ್ಯಾಕ್ಸಿಗಳು  ಕೇವಲ ತಂತ್ರಜ್ಞಾನ ಒದಗಿಸುವ ಸಂಸ್ಥೆಗಳಲ್ಲ. ಈ ಟ್ಯಾಕ್ಸಿಗಳು ಸಾಮಾನ್ಯ ಟ್ಯಾಕ್ಸಿಗಳ ವ್ಯಾಪ್ತಿಗೆ ಬರುತ್ತವೆ’  ಎಂದು ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳು ಕೆಲವೇ ದಿನಗಳ ಹಿಂದೆ ಸ್ಪಷ್ಟಪಡಿಸಿದ್ದರು. 

ಬಾಡಿಗೆ ನಿಯಮಗಳನ್ನು ಪಾಲಿಸದ ಕೆಲವು ಟ್ಯಾಕ್ಸಿಗಳ ಪರವಾನಗಿಯನ್ನು ಸಾರಿಗೆ ಇಲಾಖೆ ಈಗಾಗಲೇ ರದ್ದುಪಡಿಸಿದೆ. ಈ ಸಂಬಂಧ ರಾಜ್ಯದ ನಿಯಮ ರೂಪಿಸಲು ಕೇಂದ್ರ ಸರ್ಕಾರದ ಸಲಹಾ ಮಾರ್ಗಸೂಚಿಗಾಗಿ ಇಲಾಖೆ ಕಾಯುತ್ತಿದೆ. ದೇಶದಾದ್ಯಂತದ ಎಲ್ಲ ಟ್ಯಾಕ್ಸಿಗಳಿಗೆ  ಅನ್ವಯವಾಗುವಂತಹ ಮಾದರಿ ಮಾರ್ಗಸೂಚಿಯನ್ನು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಸಿದ್ಧಪಡಿಸಿದೆ.

ಅದನ್ನು ಎಲ್ಲ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗುತ್ತದೆ. ಸಾರಿಗೆ ಇಲಾಖೆ ಇದಕ್ಕೆ ಸಲಹೆ ನೀಡಬಹುದು ಹಾಗೂ ಆಕ್ಷೇಪ ವ್ಯಕ್ತಪಡಿಸಬಹುದು.

ಸಾರಿಗೆ ಇಲಾಖೆಯ ಆಯುಕ್ತ ರಾಮೇಗೌಡ ಪ್ರತಿಕ್ರಿಯಿಸಿ, ‘ಪರವಾನಗಿ ನಿಯಮ ಉಲ್ಲಂಘಿಸಿದ, ಅಧಿಕ ಬಾಡಿಗೆ ವಸೂಲಿ ಮಾಡಿದ ಟ್ಯಾಕ್ಸಿಗಳ ವಿರುದ್ಧ ಇಲಾಖೆ ಕ್ರಮ ಕೈಗೊಂಡಿದೆ. 10 ದಿನಗಳಲ್ಲಿ ಕರಡು ಮಾರ್ಗಸೂಚಿ ಸಿದ್ಧವಾಗಲಿದೆ. ಈ ಮಾರ್ಗಸೂಚಿ ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೂ ಅನ್ವಯವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.