ADVERTISEMENT

ಆ.15ರಿಂದ ‘ಇಂದಿರಾ ಕ್ಯಾಂಟೀನ್‌’ ಆರಂಭ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:43 IST
Last Updated 25 ಏಪ್ರಿಲ್ 2017, 19:43 IST

ಬೆಂಗಳೂರು:  ಆಗಸ್ಟ್‌ 15ರಂದು ನಗರದ ಎಲ್ಲ 198 ವಾರ್ಡ್‌ಗಳಲ್ಲೂ ‘ಇಂದಿರಾ ಕ್ಯಾಂಟೀನ್‌’ಗಳಿಗೆ ಚಾಲನೆ ನೀಡಲಿದ್ದು, ಇದರ ನಿರ್ವಹಣೆಯ ಉಸ್ತುವಾರಿಯನ್ನು ಮಹಾನಗರ ಪಾಲಿಕೆಗೆ  (ಬಿಬಿಎಂಪಿ) ವಹಿಸಲಾಗುವುದು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದರು.

‘ಇಂದಿರಾ ಕ್ಯಾಂಟೀನ್’ ಆರಂಭಿಸುವ ಕುರಿತು ಮಂಗಳವಾರ ಸಂಜೆ ವಿಧಾನಸೌಧದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ವಿವರ ನೀಡಿದರು.

ಈಗಾಗಲೇ  ನಗರದಲ್ಲಿ 240 ಸ್ಥಳಗಳನ್ನು ಗುರುತಿಸಲಾಗಿದೆ.  ಲ್ಯಾಂಡ್‌ ಆರ್ಮಿ ಮೂಲಕ ಕ್ಯಾಂಟೀನ್‌ ಕಟ್ಟಡಗಳನ್ನು ನಿರ್ಮಿಸಲಾಗುವುದು.  500 ಚದರಡಿ ವಿಸ್ತೀರ್ಣದ  ಕಟ್ಟಡಕ್ಕೆ ₹ 7.50 ಲಕ್ಷ ವೆಚ್ಚವಾಗುತ್ತದೆ.  ಒಟ್ಟು ₹ 15 ಕೋಟಿ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದರು. ಇಂದಿನ ಸಭೆಯಲ್ಲಿ ಮೆನು ಬಗ್ಗೆ ಚರ್ಚಿಸಲಾಯಿತು.  ತಮಿಳುನಾಡಿನ ‘ಅಮ್ಮ ಕ್ಯಾಂಟೀನ್‌’ ನೋಡಿ ಬಂದು ಮೆನು ತೀರ್ಮಾನಿಸಲು ನಿರ್ಧರಿಸಲಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

ADVERTISEMENT

ಈ ಮಹತ್ವಾಕಾಂಕ್ಷೆಯ ಯೋಜನೆಗೆ ಲಾಂಛನಗಳನ್ನು ಆಹ್ವಾನಿಸಲಾಗಿತ್ತು. 671 ಜನ ಲಾಂಛನಗಳನ್ನು ಕಳುಹಿಸಿದ್ದಾರೆ. 177 ಜನ  ಕ್ಯಾಂಟೀನ್‌ ಕಟ್ಟಡದ  ಮಾದರಿಗಳನ್ನು ಕಳುಹಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ  ಸಚಿವ ಜಾರ್ಜ್‌ ಅವರ ಅಧ್ಯಕ್ಷತೆಯ ಸಮಿತಿ ಲಾಂಛನ ಮತ್ತು ಕಟ್ಟಡದ ಮಾದರಿ ಅಂತಿಮಗೊಳಿಸಲಿದೆ. ಕ್ಯಾಂಟೀನ್‌ಗಳನ್ನು ಆರಂಭಿಸಲು ಇನ್ನು 2–3 ತಿಂಗಳು ಬೇಕಾಗುತ್ತದೆ.  ಆಹಾರ ತಯಾರಿಕೆ ಗುತ್ತಿಗೆ ಯಾರಿಗೆ ಕೊಡಬೇಕು ಎಂಬುದರ ನಿರ್ಧಾರ ಆಗಬೇಕಿದೆ ಎಂದರು.

ಸ್ಲಂ ವಾಸಿಗಳಿಗೆ ಉಚಿತ ನೀರು: ನಗರದ ಕೊಳೆಗೇರಿ ನಿವಾಸಿಗಳಿಗೆ ತಿಂಗಳಿಗೆ 10 ಸಾವಿರ ಲೀಟರ್‌ ಉಚಿತ ನೀರು ನೀಡುವುದರ ಬಗ್ಗೆ ಸದ್ಯದಲ್ಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗುವುದು. ಕೊಳೆಗೇರಿಗಳಲ್ಲಿ ಇಲ್ಲಿಯವರೆಗೆ ನೀರಿನ ಶುಲ್ಕ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವುದನ್ನು ಮನ್ನಾ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.