ADVERTISEMENT

ಇಂದಿನಿಂದ ರಸ್ತೆ ಶುಲ್ಕ ದುಬಾರಿ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:33 IST
Last Updated 31 ಮಾರ್ಚ್ 2015, 19:33 IST

ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ ನಡುವಣ ರಾಷ್ಟ್ರೀಯ    ಹೆದ್ದಾರಿ –7ರಲ್ಲಿ ಪ್ರಯಾಣಿಸುವ ವಾಹನ ಸವಾರರು ಇನ್ನು ಮುಂದೆ ಅಧಿಕ ರಸ್ತೆ ಶುಲ್ಕ (ಟೋಲ್‌) ಪಾವತಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ರಸ್ತೆ ಶುಲ್ಕವನ್ನು ಪರಿಷ್ಕರಿಸಿದೆ.

ರಸ್ತೆಯಲ್ಲಿ ಹೋಗಿ ಬರುವ ಕಾರು ಗಳು, ಜೀಪುಗಳು, ವ್ಯಾನ್‌ಗಳು ರೂ120 ಪಾವತಿಸಬೇಕಿದೆ. ಈ ಹಿಂದೆ ದರ ರೂ115 ಇತ್ತು. ತಿಂಗಳ ಪಾಸ್‌ ಮೊತ್ತ ರೂ2,560ರಿಂದ ರೂ2,650ಕ್ಕೆ ಏರಿಕೆ ಯಾಗಿದೆ. ಅದೇ ರೀತಿ, ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ ಗಳು, ಮಿನಿ ಬಸ್‌ಗಳು ಹೋಗಿ ಬರಲು ರೂ180 ನೀಡಬೇಕಿದೆ. ಮಾಸಿಕ ಪಾಸ್‌ ದರ ರೂ4,020 ಆಗಿದೆ.

ಬಿಎಂಟಿಸಿ ಬಸ್‌ಗಳು ಹೋಗಿ ಬರುವಾಗ ಹೆಚ್ಚುವರಿಯಾಗಿ ರೂ10 ಪಾವತಿಸಬೇಕಿದೆ. ಟೋರ್‌ ದರ ಹೆಚ್ಚಿರುವ ಕಾರಣ ಬಸ್‌ ದರ ಹೆಚ್ಚಿಸುವ ಬಗ್ಗೆ ಬಿಎಂಟಿಸಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಂವಹನ ಪತ್ರ ಬಂದ ಬಳಿಕವೇ  ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌ ತಿಳಿಸಿದರು. ‘ಒಂದು ವೇಳೆ ರೂ4 ಅಥವಾ ರೂ5ರಷ್ಟು ರಸ್ತೆ ಶುಲ್ಕ ಹೆಚ್ಚಿಸಿದ್ದರೆ ಬಸ್‌ ದರ ಹೆಚ್ಚಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಪ್ರತಿ ದಿನ ವಿಮಾನ ನಿಲ್ದಾಣಕ್ಕೆ 30 ಸಾವಿರ ಕ್ಯಾಬ್‌ಗಳು ಹಾಗೂ ಟ್ಯಾಕ್ಸಿಗಳು ಪ್ರಯಾಣ ಮಾಡುತ್ತಿವೆ. ಏಪ್ರಿಲ್‌ 1ರಿಂದ ಹೆಚ್ಚುವರಿಯಾಗಿ ರೂ5 ಪಾವತಿಸಬೇಕಿದೆ. ಮುಂದಿನ ಆರ್ಥಿಕ ವರ್ಷದಲ್ಲೂ ಟೋಲ್‌ ದರ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ಬೆಂಗ ಳೂರು ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಹೊಳ್ಳ ಮನವಿ ಮಾಡಿದರು.

‘ರಸ್ತೆ ಶುಲ್ಕ ಪರಿಷ್ಕರಿಸಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಬೇಕು. ಸಾರ್ವಜನಿಕ ಸಾರಿಗೆಗೆ ರಸ್ತೆ ಶುಲ್ಕ ಅನ್ವಯವಾಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು’ ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿ ಕೆಯ ವಿನಯ್‌ ಶ್ರೀನಿವಾಸ್‌ ಸಲಹೆ ನೀಡಿದರು.

*ರಸ್ತೆ ಶುಲ್ಕ ಪರಿಷ್ಕರಣೆ ನಿರಂತರ ಪ್ರಕ್ರಿಯೆ. ಸಗಟು ದರ ಸೂಚ್ಯಂಕದ ಆಧಾರದಲ್ಲಿ ಪ್ರಾಧಿಕಾರ ದರ ಪರಿಷ್ಕರಿಸಿದೆ.
ಸುರೇಂದ್ರ ಕುಮಾರ್‌, ರಾಷ್ಟ್ರೀಯ ಹೆದ್ದಾರಿ ‍ಪ್ರಾಧಿಕಾರದ ರಾಜ್ಯದ ಯೋಜನಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT