ADVERTISEMENT

ಇನ್ನುಮುಂದೆ ವಾರದೊಳಗೇ ಖಾತೆ ನೋಂದಣಿ!

‘ಸಕಾಲ’ ಯೋಜನೆ ಅಡಿಯಲ್ಲಿ ಅರ್ಜಿ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 20:08 IST
Last Updated 25 ಜುಲೈ 2016, 20:08 IST
ಇನ್ನುಮುಂದೆ ವಾರದೊಳಗೇ ಖಾತೆ ನೋಂದಣಿ!
ಇನ್ನುಮುಂದೆ ವಾರದೊಳಗೇ ಖಾತೆ ನೋಂದಣಿ!   

ಬೆಂಗಳೂರು: ಖಾತೆ ಮಾಡಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಗೆ ಅಲೆದು, ಅಲೆದು ಸುಸ್ತು ಹೊಡೆದಿದ್ದೀರಾ? ಹಾಗಾದರೆ, ನಿಮಗೆ ಇಲ್ಲಿದೆ ಒಂದು ಸಂತಸದ ಸುದ್ದಿ. ಖಾತೆಗಳಿಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ‘ಸಕಾಲ’ ಯೋಜನೆ ಅಡಿಯಲ್ಲಿ ಅರ್ಜಿ ಸ್ವೀಕರಿಸಿ ವಾರದೊಳಗೇ ಒದಗಿಸಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತೆ (ಕಂದಾಯ) ವಿ.ರಶ್ಮಿ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ‘2011ರಲ್ಲೇ ‘ಸಕಾಲ’ ಸೇವೆ ಜಾರಿಗೆ ಬಂದಿದ್ದರೂ ಕಂದಾಯ ವಿಭಾಗದಲ್ಲಿ ಆ ಯೋಜನೆ ಯಶಸ್ವಿಯಾಗಿ ಜಾರಿಗೆ ಬಂದಿಲ್ಲ’ ಎಂಬ ಲೋಪವನ್ನು ಅವರೂ ಎತ್ತಿ ತೋರಿದ್ದಾರೆ. ‘ತಕ್ಷಣದಿಂದ ಜಾರಿಗೆ ಬರುವಂತೆ ‘ಸಕಾಲ’ ಸೇವೆ ಆರಂಭಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.

ಬಿಬಿಎಂಪಿ ಕೈಗೊಂಡ ಈ ನಿರ್ಧಾರದಿಂದ ಸಾರ್ವಜನಿಕರು ಖಾತೆಗಳ ಸೇವೆಗಾಗಿ ವರ್ಷಗಟ್ಟಲೆ ಅಲೆಯುವುದು ತಪ್ಪಲಿದ್ದು, ಅರ್ಜಿ ಸಲ್ಲಿಸಿ ಏಳು ದಿನಗಳಲ್ಲೇ ಅಗತ್ಯ ಪ್ರಮಾಣಪತ್ರ ಸಿಗಲಿದೆ.

‘ಸಕಾಲ’ ಯೋಜನೆ ಮೂಲಕ ಸಿಗುವ ಸೇವೆಗಳ ಕುರಿತು ಬಿಬಿಎಂಪಿಯ ಎಲ್ಲ ಕಚೇರಿಗಳಲ್ಲಿ ವಾರದೊಳಗೆ ಸೂಚನಾ ಫಲಕ ಅಳವಡಿಸಬೇಕು. ಸಾರ್ವಜನಿಕರ ಅರ್ಜಿಗಳನ್ನು  ಯೋಜನೆಯ ನಿಗದಿತ ನಮೂನೆಯಲ್ಲಿ ಪಡೆದು, ಸ್ವೀಕೃತಿ ಸಂಖ್ಯೆಯುಳ್ಳ ಪತ್ರವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

ವಲಯದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳಿಂದ ಜಂಟಿ ಆಯುಕ್ತರವರೆಗೆ ಎಲ್ಲ ಅಧಿಕಾರಿಗಳು ಅರ್ಜಿ ಪರಿಶೀಲನಾ ಪ್ರಕ್ರಿಯೆಯನ್ನು ವಾರದೊಳಗೆ ಮುಗಿಸಿ, ಅಗತ್ಯ ಸೇವೆ ಒದಗಿಸಬೇಕು.

ಸೇವೆಯಲ್ಲಿ ವಿಳಂಬವಾಗಿ ನೊಂದ ಅರ್ಜಿದಾರರು ದೂರು ನೀಡಿದಲ್ಲಿ ತಕ್ಷಣ ಪರಿಹಾರ ಧನ ನೀಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ನಿರ್ದೇಶನವನ್ನೂ ಸುತ್ತೋಲೆಯಲ್ಲಿ ನೀಡಲಾಗಿದೆ.

ವೈಫಲ್ಯಕ್ಕೆ ಏನು ಕಾರಣ?
ಕಾಲಮಿತಿಯಲ್ಲಿ ಖಾತೆ ವಿಲೇವಾರಿ ಮಾಡುವ ವ್ಯವಸ್ಥೆ ಬಿಬಿಎಂಪಿಯ 64 ಕಂದಾಯ ಕಚೇರಿಗಳಲ್ಲಿ ಸಮರ್ಪಕವಾಗಿ ಜಾರಿ ಆಗಿಲ್ಲ. ‘ಸಕಾಲ’ ಯೋಜನೆಯಡಿ ಬಹುತೇಕ ಕಚೇರಿಗಳಲ್ಲಿ ಸ್ವೀಕೃತಿಯಾದ ಅರ್ಜಿಗಳ ಸಂಖ್ಯೆ ಕೇವಲ ಒಂದು ಎಂದು ತೋರಿಸಲಾಗಿದೆ! ಇನ್ನು ಕೆಲವು ಕಚೇರಿಗಳಲ್ಲಿ 2 ಅಥವಾ 3 ಎಂದು ನಮೂದಿಸಲಾಗಿದೆ.

ಯೋಜನೆ ವೈಫಲ್ಯಕ್ಕೆ ಕಾರಣವಾದ ಲೋಪಗಳ ಪಟ್ಟಿಯನ್ನೂ ಮಾಡಲಾಗಿದೆ. ಬಹುತೇಕ ಕಂದಾಯ ಕಚೇರಿಗಳಲ್ಲಿ ‘ಸಕಾಲ’ ಸೇವೆಗಳ ಮಾಹಿತಿ ಫಲಕ ಅಳವಡಿಸಿಲ್ಲ. ವ್ಯವಸ್ಥೆಯನ್ನು ಮೀರಿ (ಬೈಪಾಸ್‌) ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸೇವೆ ನೀಡುವಲ್ಲಿ ಸಮಯಪಾಲನೆ ಮಾಡಿಲ್ಲ.

ಅರ್ಜಿ ವಿಲೇವಾರಿ ಮಾಡುವಲ್ಲಿ ವಿಳಂಬ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಹೀಗಾಗಿ ಯೋಜನೆಗೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಖಾತಾ ಮೇಳಕ್ಕೆ ಸೂಚನೆ: ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಪ್ಪಿಸಲು ಪ್ರತಿ ವಲಯದಲ್ಲೂ ವಿಶೇಷ ಖಾತಾ ಮೇಳ ನಡೆಸಿ, ಅರ್ಜಿದಾರರ ಮನೆ ಬಾಗಿಲಿಗೇ ಖಾತಾ ಪತ್ರವನ್ನು ತಲುಪಿಸಬೇಕು.

ಈ ಉದ್ದೇಶಕ್ಕಾಗಿ ಮೂರು ದಿನಗಳಲ್ಲಿ ವೇಳಾಪಟ್ಟಿ ಪ್ರಕಟಿಸಬೇಕು. ಎಲ್ಲ ನಿರ್ದೇಶನಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು. ಇಲ್ಲದಿದ್ದರೆ ಸಕಾಲ ಸೇವೆಗಳ ಕಾಯ್ದೆ ಅಡಿಯಲ್ಲಿ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳಿಗೆ ರಶ್ಮಿ ಎಚ್ಚರಿಕೆ ನೀಡಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?: ಬಿಬಿಎಂಪಿ ಕಂದಾಯ ಕಚೇರಿಗಳಲ್ಲಿ ₹ 10 ಪಾವತಿಸಿ ‘ಸಕಾಲ’ ಅರ್ಜಿ ಪಡೆಯಬೇಕು. ಅದನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಆಸ್ತಿ ಖರೀದಿ ಪತ್ರ, ಹತ್ತು ವರ್ಷಗಳ ಋಣಭಾರ ಪ್ರಮಾಣ ಪತ್ರ (ಇ.ಸಿ), ಭೂಪರಿವರ್ತನೆ ಪತ್ರ ಮತ್ತು ನಕ್ಷೆಯನ್ನು ಲಗತ್ತಿಸಬೇಕು.

ಡೆವಲಪರ್‌ಗಳಿಂದ ನಿವೇಶನ ಇಲ್ಲವೆ ಫ್ಲ್ಯಾಟ್‌ ಖರೀದಿಸಿದ್ದರೆ ಅರ್ಜಿ ಸಲ್ಲಿಕೆಗೆ ಹೋಗುವ ಮುನ್ನ ಬಿಲ್ಡರ್‌ ಹೆಸರಿನಲ್ಲಿ ಇರುವ ಖಾತಾ ಪ್ರಮಾಣಪತ್ರ, ನಕ್ಷೆ ಮಂಜೂರಾತಿ ಪತ್ರ, ಮೂರು ವರ್ಷದ ತೆರಿಗೆ ಪಾವತಿ ದಾಖಲೆ ಹಾಗೂ ಸ್ವಾಧೀನ ಪ್ರಮಾಣಪತ್ರ (ಒ.ಸಿ) ಪಡೆದಿರಬೇಕು. ಕಂದಾಯ ಅಧಿಕಾರಿಗಳು ಈ ಪ್ರಮಾಣ ಪತ್ರಗಳನ್ನೂ ಕೇಳುತ್ತಾರೆ.

‘ಸಕಾಲ’ದಲ್ಲಿ ಯಾವ ಸೇವೆಗಳು ಲಭ್ಯ?
* ಖಾತಾ ನೋಂದಣಿ‌
* ಖಾತಾ ವರ್ಗಾವಣೆ
* ಖಾತಾ ಉದ್ಧೃತ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT