ADVERTISEMENT

‘ಇನ್ನೂ ನಾಲ್ಕು ದಿನ ಮಳೆ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:36 IST
Last Updated 27 ಮೇ 2017, 19:36 IST
ಹೊಸಕೆರೆಹಳ್ಳಿಯ ದತ್ತಾತ್ರೇಯನಗರದ ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರಿನಲ್ಲಿ ಓಮ್ನಿ ವ್ಯಾನ್‌ ಕೆಟ್ಟು ನಿಂತಿತ್ತು  – ಪ್ರಜಾವಾಣಿ ಚಿತ್ರ
ಹೊಸಕೆರೆಹಳ್ಳಿಯ ದತ್ತಾತ್ರೇಯನಗರದ ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರಿನಲ್ಲಿ ಓಮ್ನಿ ವ್ಯಾನ್‌ ಕೆಟ್ಟು ನಿಂತಿತ್ತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಚಂಡಮಾರುತ ಮತ್ತು ಸಮುದ್ರದ ಮೇಲ್ಮೈನಲ್ಲಿ ಬೀಸುತ್ತಿರುವ ಸುಳಿಗಾಳಿಯ ಪರಿಣಾಮ ನಗರದಲ್ಲಿ ಇನ್ನೂ ನಾಲ್ಕು ದಿನ ಗುಡುಗು–ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

‘ಮಳೆಯ ಜತೆಗೆ ಜೋರಾದ ಗಾಳಿಯೂ ಬೀಸಲಿದ್ದು, ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಮಳೆಯಾಗುತ್ತದೆ’ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಸುಂದರ ಮಹಾದೇವ ಮೇತ್ರಿ ತಿಳಿಸಿದರು.

ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲಿ ನೀರು: ದೇವನಹಳ್ಳಿ ಸುತ್ತಮುತ್ತ ಗುಡುಗು–ಸಿಡಿಲು ಸಹಿತ ಜೋರಾದ ಮಳೆಯಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್‌ ಹಾಗೂ ಕೆಲ ಭಾಗಗಳ ಜಲಾವೃತ್ತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ ನಿಲ್ದಾಣದ ಸಿಬ್ಬಂದಿ ನೀರನ್ನು ಹೊರ ಹಾಕಿದರು.

ಉರುಳಿಬಿದ್ದ ಆಟೊ: ಮೇಯರ್ ಜಿ. ಪದ್ಮಾವತಿ ಅವರು ಶುಕ್ರವಾರ ರಾತ್ರಿ ಮಳೆಯಿಂದ ಹಾನಿ ಉಂಟಾದ  ಪ್ರದೇಶಗಳಿಗೆ ಭೇಟಿ ನೀಡಿದರು. ರಾತ್ರಿ 11 ಗಂಟೆಗೆ ಖೋಡೆ ವೃತ್ತಕ್ಕೆ ಬಂದಿದ್ದ ಮೇಯರ್‌, ಅಲ್ಲಿಂದ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿದರು.

ಇಂದಿರಾನಗರದಲ್ಲಿ  ಮರ ಬಿದ್ದಿದ್ದ ಸ್ಥಳದ ವೀಕ್ಷಣೆಗೆ ಮೇಯರ್‌ ಬಂದಿದ್ದರು. ಅದೇ ಸ್ಥಳದ ರಸ್ತೆಯ ತಗ್ಗುಗಳಲ್ಲಿ ನೀರು ತುಂಬಿಕೊಂಡಿತ್ತು. ಈ ಮಾರ್ಗದಲ್ಲಿ  ಬರುತ್ತಿದ್ದ ಆಟೊರಿಕ್ಷಾವೊಂದು ಮೇಯರ್‌ ಎದುರೇ ಉರುಳಿಬಿತ್ತು.  ಚಾಲಕ ಹಾಗೂ ಮಹಿಳೆ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.