ADVERTISEMENT

ಇಬ್ಬರು ಕಾನ್‌ಸ್ಟೆಬಲ್‌ಗಳ ಬಂಧನ

ಪ್ರಕರಣ ಮುಚ್ಚಿಹಾಕಲು ಲಂಚ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 20:14 IST
Last Updated 27 ಜನವರಿ 2015, 20:14 IST

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರ ವಿರುದ್ಧ ದಾಖಲು ಮಾಡಿದ್ದ ಪ್ರಕರಣ ಮುಚ್ಚಿಹಾಕಲು ₨ 50 ಸಾವಿರ ಲಂಚ ಪಡೆಯುತ್ತಿದ್ದ ಮೈಕೋ ಲೇಔಟ್ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಮೈಕೋ ಲೇಔಟ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ ಶಿವ­ಮಾದು ಮತ್ತು ಕಾನ್‌ಸ್ಟೆಬಲ್‌ ಶಿವಕುಮಾರ್ ಬಂಧಿತರು. ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ವಿರುದ್ಧವೂ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲು ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್ ತಿಳಿಸಿದ್ದಾರೆ.

ಬಿಟಿಎಂ ಬಡಾವಣೆಯಲ್ಲಿರುವ ಫ್ಯಾಷನ್ ಎಕ್ಸ್‌ಪ್ರೆಸ್ ಎಂಬ ಬ್ಯೂಟಿ ಪಾರ್ಲರ್ ಮೇಲೆ ಮೈಕೋ ಲೇಔಟ್ ಠಾಣೆ ಪೊಲೀಸರು ಕಳೆದ ವಾರ ದಾಳಿ ನಡೆಸಿದ್ದರು. ಮಾನವ ಕಳ್ಳಸಾಗಣೆ ಆರೋಪದಡಿ ಬ್ಯೂಟಿ ಪಾರ್ಲರ್ ಮಾಲೀಕ ಅನಂತಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ‘ಬಿ’ ವರದಿ (ಮುಕ್ತಾಯ) ಸಲ್ಲಿಸಲು ₨ 2 ಲಕ್ಷ ಲಂಚ ನೀಡುವಂತೆ ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌­ಗಳು ಬೇಡಿಕೆ ಇಟ್ಟಿದ್ದರು.

ನಂತರ ಬ್ಯೂಟಿ ಪಾರ್ಲರ್ ಮಾಲೀಕರು ಭೇಟಿಯಾಗಿ ಚೌಕಾಸಿ ನಡೆಸಿದ್ದರು. ₨ 1 ಲಕ್ಷ ನೀಡುವಂತೆ ಇನ್‌ಸ್ಪೆಕ್ಟರ್ ಸೂಚಿಸಿ­ದ್ದರು. ಮೊದಲ ಕಂತಿನಲ್ಲಿ ಮಂಗಳವಾರ ₨ 50 ಸಾವಿರ ನೀಡಲು ತಿಳಿಸಿದ್ದರು. ಈ ಕುರಿತು ಅನಂತ ಕುಮಾರ್ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಇನ್‌ಸ್ಪೆಕ್ಟರ್ ಸೂಚನೆಯಂತೆ ಮಂಗಳವಾರ ಸಂಜೆ ಕಾನ್‌ಸ್ಟೆಬಲ್ ಗಳನ್ನು ಸಂಪರ್ಕಿಸಿದ ಅನಂತಕುಮಾರ್, ಹಣ ಪಡೆದುಕೊಳ್ಳುವಂತೆ ತಿಳಿಸಿದರು. ವಿಜಯಾ ಬ್ಯಾಂಕ್ ಲೇಔಟ್‌ನಲ್ಲಿರುವ ಗೋಕುಲ್ ಹೋಟೆಲ್‌ಗೆ ಬಂದ ಶಿವಮಾದು ಮತ್ತು ಶಿವಕುಮಾರ್ ₨ 50 ಸಾವಿರ ಪಡೆದುಕೊಂಡರು. ತಕ್ಷಣ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಬಂಧಿಸಿದರು.

‘ಶಿವಮಾದು ಮತ್ತು ಶಿವಕುಮಾರ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ನಂತರ ಇಬ್ಬರನ್ನೂ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮಂಜುನಾಥ್ ವಿರುದ್ಧವೂ ತನಿಖೆ ನಡೆಯುತ್ತಿದೆ. ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.