ADVERTISEMENT

ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ಆನ್‌ಲೈನ್‌ ವಂಚಕರ ಅಡ್ಡೆ ಮೇಲೆ ಸಿಐಡಿ ತಂಡದ ದಾಳಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2015, 20:08 IST
Last Updated 27 ನವೆಂಬರ್ 2015, 20:08 IST

ಬೆಂಗಳೂರು: ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ವಂಚಿಸುವ ನೈಜೀರಿಯಾ ಪ್ರಜೆಗಳ ಬೃಹತ್‌ ಜಾಲ ಆವಲಹಳ್ಳಿ ಸಮೀಪದ ಹಿರೇಗೊಂಡನಹಳ್ಳಿಯಲ್ಲಿ ಅಡಗಿರುವ ಮಾಹಿತಿ ಕಲೆ ಹಾಕಿ ಗುರುವಾರ ದಾಳಿ ನಡೆಸಿದ ಸಿಐಡಿ ತಂಡ, ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

‘ಎನೆಗಾ ಚೆಲಿಯನ್ (28) ಹಾಗೂ ಅನೋವಾ ಅಚೋಕಾ (31) ಎಂಬುವರನ್ನು ಬಂಧಿಸಿ, ಲ್ಯಾಪ್‌ಟಾಪ್ ಸೇರಿದಂತೆ ಕೆಲ ದಾಖಲೆಗಳನ್ನು ಜಪ್ತಿ
ಮಾಡಲಾಗಿದೆ.  ಮಹಿಳೆ ಸೇರಿದಂತೆ ಇನ್ನು ಮೂವರು ತಲೆಮರೆಸಿ ಕೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನ್‌ಲೈನ್‌ ವಂಚನೆ ಮೂಲಕ ಇಲಾಖೆಗೆ ಸವಾಲಾಗಿರುವ ನೈಜೀರಿಯಾ ಮೂಲದ ಜಾಲಗಳ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಇಂಥದ್ದೊಂದು ತಂಡ ಹಿರೇಗೊಂಡನಹಳ್ಳಿಯಲ್ಲಿ ನೆಲೆಸಿರುವ ಬಗ್ಗೆ ಇನ್‌ಸ್ಪೆಕ್ಟರ್ ಪ್ರಭಾಕರ್ ಅವರಿಗೆ ಮಾಹಿತಿ ಬಂತು. ಆ ನಂತರ ಡಿವೈಎಸ್ಪಿ ಸವಿಶಂಕರ್ ನಾಯಕ್ ಅವರ ನೇತೃತ್ವದ ತಂಡ, ಕಾರ್ಯಾಚರಣೆ ನಡೆಸಿ ವಂಚಕರನ್ನು ಪತ್ತೆ ಮಾಡಿದೆ’ ಎಂದು ಹೇಳಿದರು.

ಹೇಗೆ ವಂಚನೆ: ಕಾರು, ಲ್ಯಾಪ್‌ಟಾಪ್, ಎಲ್‌ಇಡಿ ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ‘ಕ್ವಿಕರ್’ ಮತ್ತು ‘ಒಎಲ್ಎಕ್ಸ್’ನಲ್ಲಿ ಜಾಹೀರಾತು ಪ್ರಕಟಿಸುವ ಈ ಆರೋಪಿಗಳು, ಅವುಗಳ ಖರೀದಿಗಾಗಿ ಸಂಪರ್ಕಿಸುವ ಜನರಿಂದ ಹಣ ಪಡೆದು ವಂಚಿಸುತ್ತಾರೆ.
‘₹ 10 ಲಕ್ಷದ ಕಾರನ್ನು ₹ 2 ಲಕ್ಷಕ್ಕೆ ಮಾರಾಟ ಮಾಡುತ್ತಿರುವುದಾಗಿ ಆನ್‌ಲೈನ್ ಮಾರಾಟ ತಾಣಗಳಲ್ಲಿ ಜಾಹೀರಾತು ಪ್ರಕಟಿಸುತ್ತಾರೆ. ಕಡಿಮೆ ಬೆಲೆಗೆ ಕಾರು ಸಿಗುತ್ತದೆಂದು ಜನ ಅವರಿಗೆ ಕರೆ ಮಾಡುತ್ತಾರೆ.

ಕರೆ ಸ್ವೀಕರಿಸುವ ಆರೋಪಿ, ‘ನಾನು ವಿದೇಶಕ್ಕೆ ತೆರಳುತ್ತಿದ್ದು, ಕಾರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ನಿಲ್ಲಿಸಿದ್ದೇನೆ. ಅಲ್ಲಿರುವ ಸುಂಕ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಕಾರು ಪಡೆದುಕೊಳ್ಳಿ’ ಎಂದು ಜಾಲದ ಮತ್ತೊಬ್ಬ ಸದಸ್ಯನ ಮೊಬೈಲ್ ಸಂಖ್ಯೆ ಕೊಡುತ್ತಾನೆ.

ನಂತರ ಗ್ರಾಹಕ ಆ ಸಂಖ್ಯೆಗೆ ಕರೆ ಮಾಡಿದಾಗ, ‘ವಾಹನ ನಿಲುಗಡೆ ಶುಲ್ಕ ಸೇರಿದಂತೆ ₹ 80 ಸಾವಿರ ಮುಂಗಡ ಹಣವನ್ನು ನನ್ನ ಬ್ಯಾಂಕ್‌ ಖಾತೆಗೆ ಹಾಕಿ ಕಾರು ಪಡೆದುಕೊಳ್ಳಿ’ ಎಂದು ಆ ಮತ್ತೊಬ್ಬ  ಸದಸ್ಯ ಹೇಳುತ್ತಾನೆ. ಅವರ ಸಂಚಿನ ಬಗ್ಗೆ ಅರಿಯದವರು,  ಆ ಖಾತೆಗೆ ಹಣ ಹಾಕುತ್ತಾರೆ. ಕೂಡಲೇ ಆರೋಪಿಗಳು ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಮೊಬೈಲ್ ಸಹ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ.

ಅಕ್ರಮವಾಗಿ ನೆಲೆಸಿದ್ದರು: ‘ಶಿಕ್ಷಣ–ವ್ಯಾಪಾರದ ಉದ್ದೇಶದಿಂದ ನಗರಕ್ಕೆ ಬಂದಿದ್ದ ಬಂಧಿತರು, ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿದ್ದಾರೆ. ಇದೇ ರೀತಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳುವಂತೆ ಎಲ್ಲ ಠಾಣೆಗಳಿಗೂ ತಿಂಗಳ ಹಿಂದೆಯೇ ಪತ್ರ ಬರೆದಿದ್ದೇವೆ’ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.
*
ಮಹಡಿಯಿಂದ ಜಿಗಿದು ಪರಾರಿ
‘ಮಫ್ತಿಯಲ್ಲಿ ಮನೆಗೆ ನುಗ್ಗುತ್ತಿದ್ದಂತೆಯೇ ಇಬ್ಬರು ಆರೋಪಿಗಳು ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಪರಾರಿಯಾದರು. ಜಾಲದ ರೂವಾರಿಯಾದ ಮಹಿಳೆ ಮನೆಯಲ್ಲಿರಲಿಲ್ಲ. ಹೀಗಾಗಿ ಇಬ್ಬರನ್ನಷ್ಟೇ ಬಂಧಿಸುವುದು ಸಾಧ್ಯವಾಯಿತು’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಬಂಧಿತರು ಇತ್ತೀಚೆಗೆ ಐದು ಮಂದಿಗೆ ₹ 7 ಲಕ್ಷ ವಂಚನೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ, ವಸ್ತುಗಳ ಖರೀದಿಗಾಗಿ ಅವರಿಗೆ ಕರೆ ಮಾಡಿದ್ದ  45 ಮಂದಿಯ ಮೊಬೈಲ್ ಸಂಖ್ಯೆಗಳು ಹಾಗೂ ಬ್ಯಾಂಕ್ ಖಾತೆಗಳ ವಿವರಗಳು ಲ್ಯಾಪ್‌ಟಾಪ್‌ನಲ್ಲಿ ಸಿಕ್ಕಿವೆ’ ಎಂದು ಮಾಹಿತಿ ನೀಡಿದರು.
*
ಜಾಲದ ಬಗ್ಗೆ ಎಚ್ಚರ
‘ಆನ್‌ಲೈನ್ ವಂಚಕರ ಬಗ್ಗೆ ಸಾರ್ವಜನಿಕರು ನಿಗಾ ವಹಿಸಬೇಕು. ಇಂಥ ಜಾಹೀರಾತುಗಳ ಆಸೆಗೆ ಬಿದ್ದು, ಮೋಸ ಹೋಗಬಾರದು. ವಸ್ತುಗಳನ್ನು ಖರೀದಿಸುವಂತೆ ಅಪರಿಚಿತ ಸಂಖ್ಯೆಯಿಂದ ಕರೆ ಅಥವಾ ಸಂದೇಶ ಬಂದರೆ ಹತ್ತಿರದ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಸೈಬರ್ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT