ADVERTISEMENT

ಇವಿಎಂ, ವಿ.ವಿ. ಪ್ಯಾಟ್‌ ಬಗ್ಗೆ ಜಾಗೃತಿ ಇಂದು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 19:31 IST
Last Updated 24 ಮಾರ್ಚ್ 2018, 19:31 IST

102 ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕಂದಾಯ ಇಲಾಖೆ ತಹಶೀಲ್ದಾರ್‌ ಗ್ರೇಡ್‌–1 ಮತ್ತು ಗ್ರೇಡ್‌–2 ವೃಂದದ 102 ಅಧಿಕಾರಿಗಳನ್ನು ಚುನಾವಣಾ ಮಾರ್ಗಸೂಚಿಗಳನ್ವಯ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ವಿಭಾಗದಲ್ಲಿ ವರ್ಗಾವಣೆಗೊಂಡ ಅಧಿಕಾರಿಗಳು: ಕೆ.ರಮೇಶ್‌– ಕಂದಾಯ ಸಚಿವಾಲಯದ ಆಡಿಟ್‌ ಸೆಲ್‌ನ ತಹಶೀಲ್ದಾರ್‌, ಪಿ.ಶಿವಣ್ಣ– ತಹಶೀಲ್ದಾರ್‌ ಪ್ರಾದೇಶಿಕ ಆಯುಕ್ತರ ಕಚೇರಿ, ವೈ.ಆರ್‌.ಶಶಿಕಲಾ– ತಹಶೀಲ್ದಾರ್‌ ಗ್ರೇಡ್‌–1 ಭೂಮಿ, ಎಂ.ವಿಜಯಣ್ಣ– ವಿಶೇಷ ತಹಶೀಲ್ದಾರ್‌ ಯಲಹಂಕ.

ADVERTISEMENT

ಇವಿಎಂ ಬಗ್ಗೆ ಜಾಗೃತಿ ಇಂದು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ನಾಗರಿಕರಿಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತ ಖಾತರಿ ಯಂತ್ರಗಳ (ವಿ.ವಿ. ಪ್ಯಾಟ್‌) ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಭಾನುವಾರ (ಇದೇ 25) ಹಮ್ಮಿಕೊಳ್ಳಲಾಗಿದೆ.

ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆ 7ಕ್ಕೆ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಚಾಲನೆ ನೀಡಲಿದ್ದಾರೆ.

ಕಬ್ಬನ್‌ ಉದ್ಯಾನ, ಲಾಲ್‌ಬಾಗ್‌, ಜೆ.ಪಿ. ಉದ್ಯಾನ ಹಾಗೂ ಸ್ಯಾಂಕಿ ಕೆರೆ ಆವರಣದಲ್ಲಿ ಬೆಳಿಗ್ಗೆ 7ರಿಂದ 11 ಹಾಗೂ ಸಂಜೆ 4ರಿಂದ 6.30ರವರೆಗೆ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದರ ಉಪಯೋಗ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂದು ಬ್ರಹ್ಮರಥೋತ್ಸವ

ಬೆಂಗಳೂರು: ಮಹದೇವಪುರ ಕ್ಷೇತ್ರದ ಮಧುರಾನಗರದಲ್ಲಿ ಇದೇ 25ರಂದು ಮಧುರಾಂಬಿಕಾ ದೇವಿಯ ಬ್ರಹ್ಮರಥೋತ್ಸವ ನಡೆಯಲಿದೆ.

ಬೆಳಿಗ್ಗೆ ಮಹಾಗಣಪತಿ ಪ್ರಾರ್ಥನೆ, ಬಳಿಕ ಅಷ್ಟೋತ್ತರ ಹೋಮ, ರಥಶಾಂತಿ ಹೋಮ, ಪುರ್ಣಾಹುತಿ ಹಾಗೂ ಪೂರ್ಣಕುಂಭಾಭಿಷೇಕ, ನವಗ್ರಹ ಪೂಜಾ ಕಾರ್ಯಗಳು ನಡೆಯಲಿವೆ.

ನಂತರ ಭಕ್ತಾದಿಗಳ ಸಮ್ಮುಖದಲ್ಲಿ ಬ್ರಹ್ಮರಥಕ್ಕೆ ವಿಶೇಷ ಪೂಜೆ ನೆರವೇರಲಿವೆ. ಭಕ್ತಾದಿಗಳು ಮಧುರಾ ನಗರದ ಪ್ರಮುಖ ಬೀದಿಯಲ್ಲಿ ಬ್ರಹ್ಮರಥವನ್ನು ಎಳೆಯುವರು. ಈ ವೇಳೆ ಕಲಾವಿದರಿಂದ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಹುಲಿವೇಷ, ತಮಟೆ ವಾದ್ಯ, ಕೀಲು ಕುದುರೆ ಕುಣಿತಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

ಆಯೋಗದ ಅಧ್ಯಕ್ಷರ ಭೇಟಿ ನಾಳೆ

ರಾಮನಗರ: ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ. ಮುನಿಯಪ್ಪ ಮತ್ತು ಸದಸ್ಯರಾದ ಲ. ಆನಂದ, ಸಂದ್ರಿಮುನಿ, ವೈ. ಸುಬ್ರಮಣಿ ಹಾಗೂ ಕಾರ್ಯದರ್ಶಿ ಎಚ್.ಎಸ್ ಶಿವರಾಜು ಇದೇ 26ರಂದು ಬೆಳಿಗ್ಗೆ 10 ಗಂಟೆಗೆ ಚನ್ನಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಅವರು ಅಬ್ಬೂರು ಗ್ರಾಮದ ಸರ್ವೆ ನಂ.413ರ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.