ADVERTISEMENT

ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ

ಆನ್‌ಲೈನ್‌ ಅಭಿಯಾನ ಆರಂಭಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:51 IST
Last Updated 1 ಜುಲೈ 2016, 19:51 IST

ಬೆಂಗಳೂರು: ಹೆಬ್ಬಾಳದಿಂದ ಬಸವೇಶ್ವರ ವೃತ್ತದವರೆಗೆ ಉಕ್ಕಿನ ಮೇಲ್ಸೇತುವೆ ನಿರ್ಮಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗೆ ಸಾರ್ವಜನಿಕರ ವಿರೋಧ  ಇನ್ನಷ್ಟು ತೀವ್ರಗೊಂಡಿದೆ. ₹ 1,350 ಕೋಟಿ ವೆಚ್ಚದ ಈ ಯೋಜನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಾಕಷ್ಟು ಕಾಲಾವಕಾಶ ನೀಡದ ಬಗ್ಗೆಯೂ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.

ಈ ಯೋಜನೆಯನ್ನು ವಿರೋಧಿಸಿ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ ಹಾಗೂ ಬಸ್‌ ಪ್ರಯಾಣಿಕರ ವೇದಿಕೆಯವರು   ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರಿಗೆ ಪತ್ರ ಬರೆದಿದ್ದಾರೆ.

ಆನ್‌ಲೈನ್‌ ಅಭಿಯಾನ: ಈ ಯೋಜನೆಯನ್ನು ವಿರೋಧಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನವು (ಎನ್‌ಬಿಎಫ್‌) ಆನ್‌ಲೈನ್‌ ಅಭಿಯಾನ ಆರಂಭಿಸಿದೆ.
‘ಸಾರ್ವಜನಿಕರಿಗೆ ಈ ಯೋಜನೆಯ ಮಾಹಿತಿ ಸಿಗುತ್ತಿಲ್ಲ. ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿಕರು ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.  ವಿರೋಧ ವ್ಯಕ್ತವಾದರೆ ಸರ್ಕಾರ ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಎನ್‌ಬಿಎಫ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಧರ್‌ ಪಬ್ಬಿಸೆಟ್ಟಿ ತಿಳಿಸಿದ್ದಾರೆ.

ಯೋಜನೆ ಹಿಂದೆ ರಾಜಕಾರಣಿಗಳ ಹಿತಾಸಕ್ತಿ: ‘ನಿವಾಸಿಗಳ ಕ್ಷೇಮಾಭಿವೃದ್ಧಿಗಳ ಸಂಘಟನೆಗಳು ಉಕ್ಕಿನ ಸೇತುವೆ ಬಗ್ಗೆ ಆತಂಕ ವ್ಯಕ್ತಪಡಿಸಿ ನನಗೆ ಪತ್ರ ಬರೆದಿದ್ದಾರೆ. ಸರ್ಕಾರ ಈ ಯೋಜನೆಯನ್ನು ನಿಭಾಯಿಸುತ್ತಿರುವ ರೀತಿ ನನ್ನಲ್ಲೂ ನಿರಾಶೆ ಮೂಡಿಸಿದೆ. ಗುತ್ತಿಗೆದಾರರಿಗೆ ಹಾಗೂ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡಲೆಂದೇ ರೂಪಿಸಿದ ಯೋಜನೆ ಇದು. ಇದರಲ್ಲಿ ನಾಗರಿಕ ಹಿತಾಸಕ್ತಿಯೂ ಇಲ್ಲ.  ಯೋಜನೆಯೂ ಸಮರ್ಪಕವಾಗಿಲ್ಲ.   ಇದು ಸಾರ್ವಜನಿಕರ ಹಣ ಪೋಲು ಮಾಡಲು ರೂಪಿಸಿರುವ ಯೋಜನೆ ಅಲ್ಲದೇ ಬೇರೇನಲ್ಲ’ ಎಂದು ರಾಜೀವ ಚಂದ್ರಶೇಖರ್‌   ಆರೋಪಿಸಿದ್ದಾರೆ.

ಬೆಂಗಳೂರು ಮಹಾನಗರ ಯೋಜನಾ ಸಮಿತಿಯಲ್ಲಿ ಈ ಯೋಜನೆ ಬಗ್ಗೆ ಚರ್ಚೆ  ನಡೆಯಬೇಕಿತ್ತು.  ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು’ ಎಂದು  ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಉತ್ತರ ಸಿಗದ ಪ್ರಶ್ನೆಗಳು:  ಈ ಯೋಜನೆಗೆ ಏಕಿಷ್ಟು ಆತುರ? ಇದರ  ವಿನ್ಯಾಸ, ಪರಿಸರದ ಮೇಲಾಗುವ ಪರಿಣಾಮ, ನಿರ್ವಹಣೆ, ನಗರದ ಸೌಂದರ್ಯ ಕುರಿತ ಪ್ರಶ್ನೆಗಳು ಹಾಗೆಯೇ ಉಳಿದಿವೆ. ಭವಿಷ್ಯದಲ್ಲಿ ಎತ್ತರಿಸಿದ ಹೆದ್ದಾರಿ ಜತೆಗೆ ಇದು ಜೋಡಣೆ ಆಗಲಿದೆಯೇ?  ಎಂಬುದಕ್ಕೂ ಉತ್ತರ ಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಅಭಿವೃದ್ಧಿಗೆ ದೂರದೃಷ್ಟಿಯಿಂದ ಕೂಡಿದಯೋಜನೆಯ ಅಗತ್ಯ ಇದೆ. ಇದು ಆರ್ಥಿಕ ಅಂಶಗಳನ್ನೂ ಒಳ ಗೊಂಡಿರಬೇಕು.   ಬಿಡಿಎ ಯೋಜನೆ ರೂಪಿಸುವಾಗ ಹೆಚ್ಚು ಪಾರದರ್ಶಕವಾಗಿ ವರ್ತಿಸಬೇಕು. ಜನರ ಅಭಿಪ್ರಾಯಗಳಿಗೆ ಮನ್ನಣೆ ಸಿಗಬೇಕು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು ಸರ್ಕಾರೇತರ ಸಂಘಟನೆಗಳು ಹಾಗೂ ಬಿಎಂಪಿಸಿಗಳು ಇಂತಹ ಯೋಜನೆ ಬಗ್ಗೆ ಮುಕ್ತ  ಸಂವಾದ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಲು ಮೂರೇ ದಿನ ಕಾಲಾವಕಾಶ: ಆಕ್ಷೇಪ
‘ಯೋಜನೆ ಬಗ್ಗೆ ಆಕ್ಷೇಪ ಸಲ್ಲಿಸಲು ಸಾರ್ವಜನಿಕರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ತಪ್ಪು. ಕನಿಷ್ಠ ಒಂದು ತಿಂಗಳ ಅವಕಾಶ ನೀಡಬೇಕು’ ಎಂದು ಬಸ್‌ ಪ್ರಯಾಣಿಕರ ವೇದಿಕೆ ಒತ್ತಾಯಿಸಿದೆ.

ಈ ಕುರಿತು  ಮುಖ್ಯಮಂತ್ರಿಗೆ ಹಾಗೂ ಬಿಡಿಎ ಆಯುಕ್ತರಿಗೆ ವೇದಿಕೆ ಪದಾಧಿಕಾರಿಗಳು ಪತ್ರ ಬರೆದಿದ್ದಾರೆ. ‘ಯಾವುದೇ ಚರ್ಚೆ ನಡೆಸದೆ ಯೋಜನೆ ಕೈಗೆತ್ತಿಕೊಂಡಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಬಿಡಿಎ ಸಂವಿಧಾನ 74ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತಿದೆ. ಕರ್ನಾಟಕ ನಗರ ಯೋಜನೆಯ ನಿಯಮಗಳನ್ನು ಪಾಲಿಸದೆ ಯೋಜನೆಗೆ ಭೂಬಳಕೆ ಮಾಡಲಾಗುತ್ತಿದೆ. ಈ ಸಂಬಂಧ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

‘ಈ ಯೋಜನೆಗಾಗಿ 500 ಮರಗಳನ್ನು ಕಡಿಯಲಾಗುತ್ತಿದೆ. ಈ ಮೂಲಕ ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯನ್ನೂ ಉಲ್ಲಂಘನೆ ಮಾಡಲಾಗುತ್ತಿದೆ’ ಎಂದು ದೂರಿದೆ.

ಯೋಜನೆ ಜಾರಿಯಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂಬುದು ಕೇವಲ ಭ್ರಮೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆ, ಬಿಎಂಟಿಸಿಗೆ ಬಲ ತುಂಬುವ ಕೆಲಸ ಆಗಬೇಕು’ ಎಂದು ಪ್ರತಿಪಾದಿಸಿದೆ.

‘ಯೋಜನೆ ಮರುಪರಿಶೀಲನೆಗೆ ಮುಕ್ತ ಮನಸ್ಸು’
‘ಉಕ್ಕಿನ ಮೇಲ್ಸೇತುವೆ ಕುರಿತು ಅಂತಿಮ ತೀರ್ಮಾನ ಇನ್ನೂ ಆಗಿಲ್ಲ. ಇದನ್ನು ಮರುಪರಿಶೀಲಿಸುವ ಬಗ್ಗೆ  ಪ್ರಾಧಿಕಾರವು ಮುಕ್ತ ಮನಸ್ಸು ಹೊಂದಿದೆ’ ಎಂದು ಬಿಡಿಎ ಆಯುಕ್ತ ರಾಜಕುಮಾರ್‌ ಖತ್ರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಈ ನಡುವೆ ಉಕ್ಕಿನ ಸೇತುವೆ ಸಾಗುವ ಮಾರ್ಗ ಬದಲಾಯಿಸುವ ಬಗ್ಗೆಯೂ ಚಿಂತನೆ ನಡೆದಿದೆ. 275ಕ್ಕೂ ಅಧಿಕ ಪ್ರತಿಕ್ರಿಯೆ:ಈ ಯೋಜನೆ ಬಗ್ಗೆ ಬಿಡಿಎ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಮೂರು ದಿನಗಳ ಕಾಲಾವಕಾಶ ನೀಡಿತ್ತು. ಈ ಅವಧಿಯಲ್ಲಿ ಇ–ಮೇಲ್‌ ಹಾಗೂ ಪತ್ರಗಳ ಮೂಲಕ ಬಿಡಿಎಗೆ 275ಕ್ಕೂ ಪ್ರತಿಕ್ರಿಯೆಗಳು ಬಂದಿವೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘ಪ್ರತಿಕ್ರಿಯೆಗಳ ಪೈಕಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವವರೇ ಜಾಸ್ತಿ ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.