ADVERTISEMENT

ಉದ್ಯಮಿ ಅಪಹರಣ ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:51 IST
Last Updated 21 ಜನವರಿ 2017, 19:51 IST
ಉದ್ಯಮಿ ಅಪಹರಣ ದೂರು ದಾಖಲು
ಉದ್ಯಮಿ ಅಪಹರಣ ದೂರು ದಾಖಲು   

ಬೆಂಗಳೂರು: ‘ಕೆಲಸದ ನಿಮಿತ್ತ ವಿಧಾನಸೌಧಕ್ಕೆ ಬಂದಿದ್ದ ನನ್ನನ್ನು ಅಪಹರಿಸಿ ಲಾಡ್ಜ್‌ಗೆ ಕರೆದೊಯ್ದ ಇಬ್ಬರು ಪರಿಚಿತರು, ಬಲವಂತವಾಗಿ ಕೆಲ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ’ ಎಂದು ಆರೋಪಿಸಿ ಬಳ್ಳಾರಿಯ ಗಣಿ ಉದ್ಯಮಿ ಪದ್ಮನಾಭ್ ಎಂಬುವರು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಡಿ.28ರಂದು ಈ ಘಟನೆ ನಡೆದಿದ್ದು, ಪದ್ಮನಾಭ್ ಜ.17ರಂದು ದೂರು ಕೊಟ್ಟಿದ್ದಾರೆ. ತನ್ನನ್ನು ಆಟೊದಲ್ಲಿ ಅಪಹರಿಸಿದ ಸುಧಾಕರ್ ಹಾಗೂ ಸೂರ್ಯನಾರಾಯಣ್ ಎಂಬುವರು, ಉಪ್ಪಾರಪೇಟೆಯ ಲಾಡ್ಜ್‌ನಲ್ಲಿ ಕೂಡಿ ಹಾಕಿ ಸ್ಟಾಂಪ್ ಪೇಪರ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಂಡು, ಆ ದಾಖಲೆಗಳನ್ನು ವಾಪಸ್ ಕೊಡಿಸಬೇಕೆಂದು ಪದ್ಮನಾಭ್ ದೂರಿನಲ್ಲಿ ಕೋರಿದ್ದಾರೆ’ ಎಂದು ಡಿಸಿಪಿ ಎಸ್‌.ಡಿ.ಶರಣಪ್ಪ ಅವರು ತಿಳಿ
ಸಿದರು.

‘ಆರೋಪಿಗಳ ವಿರುದ್ಧ ಅಕ್ರಮ ಬಂಧನ (ಐಪಿಸಿ 341) ಹಾಗೂ ಅಪಹರಣ (ಐಪಿಸಿ 365) ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸ್ಥಳ ವಿಧಾನಸೌಧ ಠಾಣೆ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಮೂವರೂ ಪಾಲುದಾರರು:  ಆಂಧ್ರಪ್ರದೇಶದ ಉದ್ಯಮಿಗಳಾದ ಸುಧಾಕರ್ ಹಾಗೂ ಸೂರ್ಯನಾರಾಯಣ್, ಪದ್ಮನಾಭ್ ಜತೆ ಸೇರಿ ಬಳ್ಳಾರಿಯಲ್ಲಿ ಕ್ವಾರಿ ನಡೆಸುತ್ತಿದ್ದರು. ಈ ವ್ಯವಹಾರದಲ್ಲಿ ಕೆಲ ದಿನಗಳಿಂದ ಅವರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಆಗ ಆರೋಪಿಗಳು ಕ್ವಾರಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಕೊಡುವಂತೆ ಪದ್ಮನಾಭ್ ಮೇಲೆ ಒತ್ತಡ ಹೇರುತ್ತಿದ್ದರು. ಅದಕ್ಕೆ ಇವರು ಒಪ್ಪಿರಲಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೇಗಾದರೂ ಮಾಡಿ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಆರೋಪಿಗಳು, ಡಿ.28ರ ಸಂಜೆ ಅಪಹರಿಸಿ ತಮ್ಮ ಕೆಲಸ ಸಾಧಿಸಿದ್ದಾರೆ. ಮೊಬೈಲ್ ಕರೆಗಳ ವಿವರ (ಸಿಡಿಆರ್) ಆಧರಿಸಿ ಅವರಿಬ್ಬರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.