ADVERTISEMENT

ಉಪೇಂದ್ರ ವಿರುದ್ಧ ಮೇಲ್ಮನವಿಗೆ ಸಲಹೆ

ಕೃಷಿ ಭೂಮಿ ಖರೀದಿ ಪ್ರಕರಣ: ಸರ್ಕಾರಕ್ಕೆ ಹಿರೇಮಠ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:40 IST
Last Updated 12 ಫೆಬ್ರುವರಿ 2016, 19:40 IST

ಬೆಂಗಳೂರು: ‘ನಟ ಉಪೇಂದ್ರ ಅವರ ಪ್ರಕರಣದಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ನಿಯಮಗಳಿಗೆ ಸಂಬಂಧಪಟ್ಟಂತೆ ಹೈಕೋರ್ಟ್‌ ಏಕ ಸದಸ್ಯಪೀಠ ಜನವರಿ 5ರಂದು ನೀಡಿರುವ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವ
ರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ಉಪೇಂದ್ರ ಅವರು 2005ರ ಮಾರ್ಚ್‌ 18ರಂದು ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರಕೆರೆ ಹೋಬಳಿಯ ಬೆಳ್ಳೂರಿನ ಸರ್ವೇ ನಂಬರ್‌ 13,13/1 ಮತ್ತು 14ರ 17 ಎಕರೆ 10 ಗುಂಟೆ ಕೃಷಿ ಭೂಮಿ ಖರೀದಿಸಿದ್ದರು. ಕರ್ನಾಟಕ ಭೂ ಸುಧಾರಣಾ ಕಾಯ್ದೆ–1961ರಡಿ ಉಪೇಂದ್ರ ಅವರ ಆದಾಯ ಜಾಸ್ತಿ ಇದ್ದು, ಕೆಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಹಾಯಕ ಆಯುಕ್ತರು ಅಭಿಪ್ರಾಯಪಟ್ಟು, ಉಪೇಂದ್ರ ಕೃಷಿಭೂಮಿ ಹೊಂದಲು ಅರ್ಹರಲ್ಲ ಎಂದು ಆದೇಶಿಸಿದ್ದರು. ಅದರ ವಿರುದ್ಧ ಉಪೇಂದ್ರ ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಸಹ ಆಯುಕ್ತರ ಆದೇಶ ಎತ್ತಿ ಹಿಡಿದಿತ್ತು. ಬಳಿಕ ಉಪೇಂದ್ರ ಹೈಕೋರ್ಟ್‌ಗೆ ರಿಟ್‌್ ಅರ್ಜಿ ಸಲ್ಲಿಸಿದ್ದರು’ ಎಂದು ಹಿರೇಮಠ ಹೇಳಿದರು.

‘ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು, ಉಪೇಂದ್ರಕುಮಾರ್‌ ಖರೀದಿಸಿದ ಕೃಷಿ ಭೂಮಿ ಬೆಲೆ ₹22,63,298 ಮೌಲ್ಯದ್ದಾಗಿದೆ.  ಕಾಯ್ದೆ ತಿದ್ದುಪಡಿ ಪ್ರಕಾರ ಕೃಷಿ ಭೂಮಿ ಹೊಂದಲು ಉಪೇಂದ್ರ ಅರ್ಹರು ಎಂದು ತೀರ್ಪು ನೀಡಿದೆ. ಆದರೆ, 2005ರಲ್ಲಿ ಖರೀದಿಸಿದ ಭೂಮಿಗೆ 2015ನೇ ವರ್ಷದ ತಿದ್ದುಪಡಿ  ನಿಯಮಗಳನ್ನು ಪರಿಗಣಿಸಲಾಗಿದೆ’ ಎಂದು ಹಿರೇಮಠ ಆಕ್ಷೇಪಿಸಿದರು.

‘ಈ ಆದೇಶ ಅಕ್ರಮವಾಗಿ ಭೂಮಿ ಖರೀದಿಸಿದ ಸಾವಿರಾರು ಜನರಿಗೆ ವರದಾನವಾಗಿದೆ. ಆದರೆ ಬಡ ರೈತರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಇದೇ ಆದೇಶ ಆಧರಿಸಿ ನೂರಾರು  ಜನರು ಕೃಷಿ ಭೂಮಿ ಖರೀದಿಯನ್ನು ಕ್ರಮಬದ್ಧವಾಗಿಸಿಕೊಳ್ಳಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.